ಬೆಂಗಳೂರು: ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸರಿಯಾಗಿ ತರಬೇತಿ ಕೊಡದೇ ಸಮೀಕ್ಷೆಯಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಮೀಕ್ಷೆ ಗೊಂದಲದ ಬಗ್ಗೆ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ದೊಡ್ಡ ಗೊಂದಲ ಆಗಿದೆ. ಸಮೀಕ್ಷೆಯ ಆಪ್ ಸರಿಯಾಗಿ ವರ್ಕ್ ಆಗುತ್ತಿಲ್ಲ. ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಪ್ರತಿಭಾವಂತರು ಇದ್ದಾರೆ. ಆದರೂ ಸರ್ಕಾರ ಸರಿಯಾಗಿ ಆಪ್ ಮಾಡಿಲ್ಲ. ಸರ್ಕಾರದವರು 1.43 ಕೋಟಿ ಮನೆ ಸರ್ವೆ ಎಂದು ಹೇಳುತ್ತಿದ್ದಾರೆ. ಈವರೆಗೂ ಸಮೀಕ್ಷೆಯವರು ಎಷ್ಟು ಮನೆಗೆ ತಲುಪಿದ್ದಾರೆ? ಈವರೆಗೂ 4 ಲಕ್ಷ ಮನೆ ಮಾತ್ರ ತಲುಪಿದ್ದಾರೆ. 15 ದಿನಗಳಲ್ಲಿ ಸಮೀಕ್ಷೆ ಮಾಡಿ ವರದಿ ಕಡುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಶಿಕ್ಷಕರ ರಜೆಯಲ್ಲಿ ಸಮೀಕ್ಷೆ ಮಾಡುತ್ತೇವೆ ಎಂದರು. ಸಮಯ ಮುಗಿದರೂ ಸಮೀಕ್ಷೆ ಮುಗಿದಿಲ್ಲ. ಮತ್ತೆ ಶಿಕ್ಷಕರು ಸಿಗುತ್ತಾರಾ? 60 ಪ್ರಶ್ನೆ ಮಾಡಿದ್ದೀರಾ. ಅಷ್ಟು ಪ್ರಶ್ನೆ ಕೇಳುವುದರಲ್ಲಿ ಆಪ್ ಹ್ಯಾಂಗ್ ಆಗುತ್ತಿದೆ. ನಿಮ್ಮ ಸಮೀಕ್ಷೆ 15 ದಿನ ಗಡುವು ಮುಗಿಯುತ್ತಿದೆ. ಈಗ 450 ಕೋಟಿ ಎಂದು ಹೇಳುತಿದ್ದೀರಾ. ಆಮೇಲೆ 650 ಕೋಟಿ ಮಾಡುತ್ತೀರಿ. ಹಿಂದೆ 180 ಕೋಟಿ ವೆಚ್ಚದಲ್ಲಿ ಮಾಡಿದ್ದ ಕಾಂತರಾಜು ಸರ್ವೆಯ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ.