ಬಾಗಲಕೋಟೆ: ನಗರದ ವಿದ್ಯಾಗಿರಿಯ ಖಾಸಗಿ ಪಿಜಿಯೊಂದರಲ್ಲಿ ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುನಗ ತಾಂಡಾದ ಸೀಮಾ ರಾಠೋಡ (17) ಸಾವಿಗೀಡಾದ ವಿದ್ಯಾರ್ಥಿನಿ.
ನಗರದ ಪಿಯು ಕಾಲೇಜೊಂದರಲ್ಲಿ ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದಳು. ಪಿಜಿಯಲ್ಲಿ ಕೆಲವು ವಿದ್ಯಾರ್ಥಿನಿಯರು ರೂಮ್ ಒಳಗೆ ಹೋಗುತ್ತಿದ್ದಂತೆ ಯುವತಿಯ ಮೃತದೇಹ ಸ್ಲ್ಯಾಬ್‍ನ ಹುಕ್‍ನಲ್ಲಿ ನೇತಾಡುತ್ತಿರುವುದನ್ನು ಕಂಡು ಕಿರುಚಾಡುತ್ತ ಹೊರಗೆ ಓಡಿ ಬಂದಿದ್ದಾರೆ. ವಿದ್ಯಾರ್ಥಿನಿಯರು ಹೊರಗೆ ಬಂದಿದ್ದನ್ನು ಕಂಡು, ಪಿಜಿಯ ಭದ್ರತಾ ಸಿಬ್ಬಂದಿ ಬಂದು ನೋಡಿದ್ದಾರೆ. ಬಳಿಕ ನೇಣು ಬಿಚ್ಚಿ ಆಸ್ಪತ್ರೆಗೆ ಸಾಗಿಸಿದ್ದಾರೆ
ಜಿಲ್ಲಾಸ್ಪತ್ರೆ ವೈದ್ಯರು ಪರೀಕ್ಷಿಸಿ ಯುವತಿ ಮೃತಪಟ್ಟಿದ್ದನ್ನು ಖಚಿತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ.
ಪೋಷಕರು ಯುವತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಮಗೆ ಕರೆ ಮಾಡಿ ಪಿಟ್ಸ್ ಬಂದಿದೆ ಎಂದಿದ್ದರು. ಈಗ ನೇಣು ಹಾಕಿಕೊಂಡಿದ್ದಾಳೆ ಎನ್ನುತ್ತಿದ್ದಾರೆ ಎಂದು ಪಿಜಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಸಂಬಂಧ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.