ಬೆಂಗಳೂರು: ನಗರದ ಅವೆನ್ಯೂ ರಸ್ತೆಯ ಮಾಯಾ ಸಿಲ್ಕ್ ಆ್ಯಂಡ್ ಸಾರೀಸ್ ಅಂಗಡಿ ಮಾಲಿಕನೊಬ್ಬ ನಿನ್ನೆ (ಗುರುವಾರ) ಮಹಿಳೆಗೆ ಅಮಾನುಷವಾಗಿ ಥಳಿಸಿರುವ ಘಟನೆಯನ್ನು ರಾಜ್ಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿ, ಈ ಕೃತ್ಯಕ್ಕೆ ಕಾರಣಕರ್ತರಾದವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿ ಪೊಲೀಸರಿಗೆ ಪತ್ರ ಬರೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಮಾರ್ಕೆಟ್ ಪೊಲೀಸರು ಅಂಗಡಿಯ ಮಾಲೀಕ ಉಮೇದ್ ರಾಮ್ ಮತ್ತು ಅಂಗಡಿಯ ಸಿಬ್ಬಂದಿ ಮಹೇಂದ್ರ ಶರ್ಮಾ ನನ್ನು ಬಂಧಿಸಿದ್ದಾರೆ.
ಕಳೆದ ಶನಿವಾರ ಮಹಿಳೆಯೊಬ್ಬರು ಉಮೇದ್ ರಾಮ್ ಅಂಗಡಿಯಲ್ಲಿ ಸೀರೆ ಕಳ್ಳತನ ಮಾಡಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು, ಉಮೇದ್ ರಾಮ್ ಭಾನುವಾರ ಕಾದು ಕೂತಿದ್ದಾನೆ. ಮಹಿಳೆ ಬರುತ್ತಿದ್ದಂತೆ ಆಕೆಯನ್ನು ಹಿಡಿದು, ಆತ ಮತ್ತು ಸಿಬ್ಬಂದಿ ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಬೂಟ್ ಕಾಲಿನಲ್ಲಿ ಒದ್ದು, ಮನಬಂದಂತೆ ಥಳಿಸಿದ್ದಾರೆ. ಮಹಿಳೆ ನೋವಿನಿಂದ ಅಂಗಲಾಚಿದರೂ ಬಿಡದ ಪಾಪಿ ಮಾಲೀಕನ ಈ ಕೃತ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಮಹಿಳೆ ದೂರು ಕೊಡಲು ಮುಂದಾದರೂ, ಸಿಟಿ ಮಾರ್ಕೆಟ್ ಪೊಲೀಸರು ಕಳ್ಳತನದ ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದಂತೆ, ಕನ್ನಡಪರ ಹೋರಾಟಗಾರರು ಮಹಿಳೆಯ ಪರವಾಗಿ ನಿಂತಿದ್ದಾರೆ. ಆ ಬಳಿಕ ಸಿಟಿ ಮಾರ್ಕೆಟ್ ಪೊಲೀಸರು ತರಾತುರಿಯಲ್ಲಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿ, ಗುರುವಾರ ರಾತ್ರಿ ಆರೋಪಿಗಳನ್ನು ಬಂಧಿಸಿದ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.