ನವದೆಹಲಿ: ಮತ್ತೊಂದು ಮಹತ್ವದ ಸಾಧನೆಯೆಂಬಂತೆ, ಭಾರತವು ಮಧ್ಯಮ ಶ್ರೇಣಿಯ, ಪರಮಾಣು ಸಾಮರ್ಥ್ಯದ ಅಗ್ನಿ-ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಆದರೆ, ಈ ಪರೀಕ್ಷೆಯು ಸಾಮಾನ್ಯ ಪರೀಕ್ಷೆಗಿಂತ ಭಿನ್ನವಾಗಿದ್ದು, ಭಾರತೀಯ ರೈಲ್ವೆ ಲೋಕೋಮೋಟಿವ್‌ನಿಂದ ಎಳೆಯಲ್ಪಟ್ಟ ಲಾಂಚ್ ಬೆಡ್‌ನಿಂದ (ರೈಲಿನಿಂದ) ಕ್ಷಿಪಣಿಯನ್ನು ಉಡಾವಣೆ ಮಾಡಿರುವುದು ವಿಶೇಷ.
ಈ ಐತಿಹಾಸಿಕ ಸಾಧನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿ ಘೋಷಿಸಿದ್ದಾರೆ. ಈ ಯಶಸ್ವಿ ಪರೀಕ್ಷೆಯೊಂದಿಗೆ, ಚಲಿಸುತ್ತಿರುವ ರೈಲು ಜಾಲದಿಂದ ಕ್ಯಾನಿಸ್ಟರೈಸ್ಡ್ (ಡಬ್ಬಿ ಒಳಗಿನ) ಉಡಾವಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದ ರಷ್ಯಾ, ಅಮೆರಿಕ ಮತ್ತು ಚೀನಾದಂತಹ ಆಯ್ದ ರಾಷ್ಟ್ರಗಳ ಗುಂಪಿಗೆ ಭಾರತ ಸೇರ್ಪಡೆಯಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಏನಿದು ರೈಲು ಆಧಾರಿತ ಅಗ್ನಿ-ಪ್ರೈಮ್?
ಈ ಪರೀಕ್ಷೆಯು ಭಾರತೀಯ ಸೇನೆಯು ಈಗ ಅಗ್ನಿ-ಪ್ರೈಮ್ ಕ್ಷಿಪಣಿಯನ್ನು (2,000 ಕಿ.ಮೀ. ವ್ಯಾಪ್ತಿಯ) ದೇಶದ ಯಾವುದೇ ಭಾಗದಿಂದ, ರಸ್ತೆಯ ಬೆಂಬಲವಿಲ್ಲದೆಯೂ ಉಡಾಯಿಸಬಲ್ಲದು ಎಂಬುದನ್ನು ಸಾಬೀತುಪಡಿಸಿದೆ. ಇದಕ್ಕೆ ಬೇಕಾಗಿರುವುದು ಕೇವಲ ಒಂದು ರೈಲ್ವೆ ಹಳಿ ಮಾತ್ರ. ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲವನ್ನು ಹೊಂದಿರುವುದರಿಂದ, ಈ ಸಾಮರ್ಥ್ಯವು ದೇಶದ ರಕ್ಷಣಾ ವ್ಯವಸ್ಥೆಗೆ ಮಹತ್ವದ ತಿರುವು ನೀಡಿದೆ.
ಪ್ರಯೋಜನಗಳೇನು?:
ಹೆಚ್ಚಿದ ಉಡಾವಣಾ ಸ್ಥಳಗಳು: ದೇಶದ ಯಾವುದೇ ಮೂಲೆಯಿಂದ ಬೇಕಿದ್ದರೂ ಕ್ಷಿಪಣಿಯನ್ನು ಉಡಾಯಿಸುವ ಸಾಮರ್ಥ್ಯ ದೊರೆಯುತ್ತದೆ.
ಶತ್ರುಗಳಿಂದ ಮರೆಮಾಚುವಿಕೆ: ಶತ್ರುಗಳ ಉಪಗ್ರಹಗಳಿಂದ ಕ್ಷಿಪಣಿಗಳನ್ನು ರೈಲ್ವೆ ಸುರಂಗಗಳಲ್ಲಿ ಮರೆಮಾಡಬಹುದು.
ಆಶ್ಚರ್ಯಕರ ದಾಳಿ: ಉಡಾವಣಾ ಸ್ಥಳದ ಬಳಿ ಸುರಂಗವಿದ್ದರೆ, ಕೊನೆಯ ಕ್ಷಣದವರೆಗೂ ಕ್ಷಿಪಣಿಯನ್ನು ಮರೆಮಾಚಿ, ಶತ್ರುಗಳ ಮೇಲೆ ಅನಿರೀಕ್ಷಿತವಾಗಿ ದಾಳಿ ನಡೆಸಬಹುದು.
ಸುರಕ್ಷಿತ ಸಂಗ್ರಹಣೆ: ಯುದ್ಧದ ಸಮಯದಲ್ಲಿ, ಶತ್ರುಗಳು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಾಗ, ಕ್ಷಿಪಣಿಗಳನ್ನು ಬೇರೆಡೆ ಸುರಕ್ಷಿತವಾಗಿ ಸಂಗ್ರಹಿಸಲು ಇದು ಸಹಕಾರಿಯಾಗಿದೆ.
ಮಿತಿಗಳೇನು?:
ಹಳಿಯ ಅವಲಂಬನೆ: ರೈಲ್ವೆ ಹಳಿ ಇಲ್ಲದ ಸ್ಥಳದಿಂದ ಕ್ಷಿಪಣಿಗಳ ಉಡಾವಣೆ ಸಾಧ್ಯವಿಲ್ಲ.
ನಿಖರತೆಯ ಸವಾಲು: ನಿಖರವಾದ ಗುರಿಗಾಗಿ ಕೆಲವೊಮ್ಮೆ ನಿರ್ದಿಷ್ಟ ಸ್ಥಳದಿಂದ ಉಡಾವಣೆ ಮಾಡಬೇಕಾಗುತ್ತದೆ. ರೈಲು ಆಧಾರಿತ ವ್ಯವಸ್ಥೆಯು ಯಾವಾಗಲೂ ಈ ನಿಖರತೆಯನ್ನು ಒದಗಿಸುವುದಿಲ್ಲ.
ಭದ್ರತೆಯ ಕಾಳಜಿ: ವಿಸ್ತಾರವಾದ ರೈಲ್ವೆ ಜಾಲದಾದ್ಯಂತ ಭದ್ರತೆಯನ್ನು ಖಚಿತಪಡಿಸುವುದು ಕಷ್ಟಕರವಾಗಿದ್ದು, ಯುದ್ಧದ ಸಮಯದಲ್ಲಿ ಶತ್ರುಗಳು ಹಳಿಗಳನ್ನು ಹಾಳುಮಾಡುವ ಅಪಾಯವಿರುತ್ತದೆ.
ರೈಲು ಆಧಾರಿತ ಉಡಾವಣೆಯ ಇತಿಹಾಸ
ರೈಲ್ವೆ ಹಳಿಗಳಿಂದ ಕ್ಷಿಪಣಿಗಳನ್ನು ಉಡಾಯಿಸುವ ಪರಿಕಲ್ಪನೆಯು ಹೊಸತೇನಲ್ಲ. 1980ರ ದಶಕದಲ್ಲಿ ಹಿಂದಿನ ಸೋವಿಯತ್ ಒಕ್ಕೂಟವು ತನ್ನ ಆರ್‌ಟಿ-23 ಮೊಲೊಡೆಟ್ಸ್ ಎಂಬ ಖಂಡಾಂತರ ಕ್ಷಿಪಣಿಯನ್ನು ವಿಶೇಷ ರೈಲುಗಳಿಂದ ಉಡಾಯಿಸಿತ್ತು. ನಂತರ, ಅಮೆರಿಕ ಕೂಡ ‘ಪೀಸ್‌ಕೀಪರ್ ರೈಲ್ ಗ್ಯಾರಿಸನ್’ ಎಂಬ ವ್ಯವಸ್ಥೆಯನ್ನು ಸ್ಥಾಪಿಸಿತ್ತು. ಆದರೆ, ಶೀತಲ ಸಮರದ ಅಂತ್ಯದ ನಂತರ ಈ ಯೋಜನೆಯನ್ನು ರದ್ದುಗೊಳಿಸಲಾಯಿತು. ಈ ಎಲ್ಲಾ ಪ್ರಯತ್ನಗಳ ಹಿಂದಿನ ಮೂಲ ಉದ್ದೇಶವು ಕೇವಲ ಉಡಾವಣಾ ಸಾಮರ್ಥ್ಯಗಳನ್ನು ವಿಸ್ತರಿಸುವುದು ಮಾತ್ರವಲ್ಲ, ಶತ್ರುಗಳ ದಾಳಿಯಿಂದ ತಮ್ಮ ಪರಮಾಣು ಸಾಮರ್ಥ್ಯವನ್ನು ರಕ್ಷಿಸಿಕೊಳ್ಳುವುದು ಕೂಡ ಆಗಿದೆ.



















