ಕೋಲ್ಕತ್ತಾ: ದುರ್ಗಾ ಪೂಜೆಯ ಸಂಭ್ರಮದಲ್ಲಿ ಮುಳುಗಿರುವ ಕೋಲ್ಕತ್ತಾದಲ್ಲಿ ಮಹಾಮಳೆ ಭಾರೀ ಅನಾಹುತ ಸೃಷ್ಟಿಸಿದೆ. ಸೋಮವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ. ವಿದ್ಯುತ್ ಸ್ಪರ್ಶದಿಂದ ಮೂವರು ಸೇರಿದಂತೆ, ಬೆನಿಯಾಪುಕುರ್, ಕಾಳಿಕಾಪುರ್, ನೇತಾಜಿ ನಗರ, ಗರಿಯಾಹತ್, ಎಕ್ಬಾಲ್‌ಪುರ್, ಬೆಹಾಲಾ ಮತ್ತು ಹರಿದೇವ್‌ಪುರ್ ಪ್ರದೇಶಗಳಲ್ಲಿ ಸಾವುಗಳು ವರದಿಯಾಗಿವೆ.
ರಾತ್ರಿಯಿಡೀ ಸುರಿದ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಕೆರೆಗಳಂತಾಗಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಹಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಕೋಲ್ಕತ್ತಾ ಮುನಿಸಿಪಲ್ ಕಾರ್ಪೊರೇಷನ್ ಪ್ರಕಾರ, ಗರಿಯಾ ಕಾಮದಹರಿಯಲ್ಲಿ 332 ಮಿ.ಮೀ., ಜೋಧ್‌ಪುರ್ ಪಾರ್ಕ್‌ನಲ್ಲಿ 285 ಮಿ.ಮೀ., ಕಾಳಿಘಾಟ್‌ನಲ್ಲಿ 280 ಮಿ.ಮೀ., ಟಾಪ್ಸಿಯಾದಲ್ಲಿ 275 ಮಿ.ಮೀ. ಹಾಗೂ ಬಲ್ಲಿಗಂಜ್‌ನಲ್ಲಿ 264 ಮಿ.ಮೀ. ಮಳೆ ದಾಖಲಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಈ ಮಳೆಯಾಗಿದ್ದು, ಇನ್ನಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆಯಿಂದಾಗಿ ವಿಮಾನ ಹಾರಾಟಕ್ಕೂ ಅಡ್ಡಿಯಾಗಿದ್ದು, ಕೋಲ್ಕತ್ತಾ ವಿಮಾನ ನಿಲ್ದಾಣದ ಟಾರ್ಮ್ಯಾಕ್ ಜಲಾವೃತಗೊಂಡಿದೆ. ಏರ್ ಇಂಡಿಯಾ ಮತ್ತು ಇಂಡಿಗೋ ಸಂಸ್ಥೆಗಳು ವಿಮಾನ ವಿಳಂಬವಾಗುವ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿವೆ.
ದುರ್ಗಾ ಪೂಜೆಗಾಗಿ ನಿರ್ಮಿಸಲಾಗಿದ್ದ ಭವ್ಯ ಪೆಂಡಾಲ್‌ಗಳು ಕೂಡ ಮಳೆಯಿಂದಾಗಿ ಹಾನಿಗೊಳಗಾಗುವ ಆತಂಕ ಎದುರಾಗಿದೆ. ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಮಾತನಾಡಿ, “ನನ್ನ ಜೀವನದಲ್ಲಿ ಇಂತಹ ಜಲಾವೃತವನ್ನು ನೋಡಿಲ್ಲ. ಸಂತ್ರಸ್ತರಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಮಳೆ ನಿಂತರೆ, ಇಂದು ರಾತ್ರಿಯೊಳಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ,” ಎಂದು ಹೇಳಿದ್ದಾರೆ.