ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಈ ವಾರದ ಆರಂಭದಲ್ಲಿ ಪಾಕಿಸ್ತಾನಿ ಪಡೆಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿವೆ. ಪಾಕಿಸ್ತಾನದ ಈ ದುಸ್ಸಾಹಸಕ್ಕೆ ಭಾರತೀಯ ಸೇನೆಯು ತಕ್ಷಣವೇ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಉನ್ನತ ರಕ್ಷಣಾ ಮೂಲಗಳು ತಿಳಿಸಿವೆ.
ಕುಪ್ವಾರಾದ ನೌಗಾಮ್ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಕಡೆಯಿಂದ ಸಣ್ಣ ಶಸ್ತ್ರಾಸ್ತ್ರಗಳಿಂದ ನಾಲ್ಕು ಸುತ್ತು ಗುಂಡು ಹಾರಿಸಲಾಯಿತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರು ಸುಮಾರು ಇಪ್ಪತ್ತು ಸುತ್ತು ಗುಂಡು ಹಾರಿಸುವ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಸೇನಾ ಮೂಲಗಳ ಪ್ರಕಾರ, ಇದೊಂದು ಸಣ್ಣ ಘಟನೆಯಾಗಿದ್ದು, ಇದನ್ನು ಕದನ ವಿರಾಮ ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಈ ಕುರಿತು ಸೇನೆಯು ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಈ ತಿಂಗಳ ಆರಂಭದಲ್ಲಿಯೂ (ಸೆಪ್ಟೆಂಬರ್ 1) ಪೂಂಚ್ ಜಿಲ್ಲೆಯ ಬಾಲಾಕೋಟ್ ಸೆಕ್ಟರ್‌ನಲ್ಲಿ ಶಂಕಿತ ಉಗ್ರರ ಒಳನುಸುಳುವಿಕೆ ಯತ್ನವನ್ನು ಭಾರತೀಯ ಸೇನೆಯು ವಿಫಲಗೊಳಿಸಿತ್ತು. ಆ ಸಂದರ್ಭದಲ್ಲಿಯೂ ಉಭಯ ಕಡೆಯ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿತ್ತು. ಅಂದಿನಿಂದ ಗಡಿ ಭಾಗದಲ್ಲಿ ಕಣ್ಗಾವಲು ಮತ್ತು ಗಸ್ತು ಹೆಚ್ಚಿಸಲಾಗಿದೆ ಎಂದು ಸೇನೆ ತಿಳಿಸಿದೆ. ಆಪರೇಷನ್ ಸಿಂದೂರದ ವೇಳೆ ನಡೆದ ಭಾರತ-ಪಾಕ್ ಘರ್ಷಣೆ ಬಳಿಕ ಉಭಯ ದೇಶಗಳು ಕದನ ವಿರಾಮ ಘೋಷಿಸಿದ್ದು, ಗಡಿಯಲ್ಲಿ ಶಾಂತಿ ನೆಲೆಸಿತ್ತು. ಈಗ ಪಾಕಿಸ್ತಾನ ಮತ್ತೆ ಬಾಲ ಬಿಚ್ಚಲು ಆರಂಭಿಸಿರುವ ಕಾರಣ, ಭಾರತೀಯ ಸೇನೆಯೂ ಪ್ರಬಲ ತಿರುಗೇಟು ನೀಡುತ್ತಿದೆ.