ಬೆಂಗಳೂರು: ಏಷ್ಯಾಕಪ್ 2025ರ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವು ಶ್ರೀಲಂಕಾದ ಯುವ ಕ್ರಿಕೆಟಿಗ ದುನಿತ್ ವೆಲ್ಲಾಲಗೆ ಅವರ ಪಾಲಿಗೆ ಕಹಿ ನೆನಪಾಗಿ ಉಳಿಯಿತು. ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದದ್ ದುಬಾರಿಯಾದ ಸಂದರ್ಭದಲ್ಲೇ, ಅವರ ತಂದೆ ಸುರಂಗ ವೆಲ್ಲಾಲಗೆ ಹೃದಯಾಘಾತದಿಂದ ನಿಧನರಾದರು. ಈ ಹೃದಯವಿದ್ರಾವಕ ಘಟನೆಯು ಕ್ರೀಡಾ ಜಗತ್ತನ್ನು ದಿಗ್ಭ್ರಮೆಗೊಳಿಸಿದೆ.
ಪಂದ್ಯದಲ್ಲಿ ಏನಾಯಿತು?
ಕೊಲಂಬೊದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ, ಅಫ್ಘಾನಿಸ್ತಾನದ ಇನಿಂಗ್ಸ್‌ನ 20ನೇ ಓವರ್ ಬೌಲಿಂಗ್ ಮಾಡಿದ ದುನಿತ್ ವೆಲ್ಲಾಲಗೆ, ಅನುಭವಿ ಆಟಗಾರ ಮೊಹಮ್ಮದ್ ನಬಿ ಅವರಿಂದ ಸತತ 5 ಸಿಕ್ಸರ್‌ಗಳನ್ನು ಹೊಡೆಸಿಕೊಂಡರು. ಆ ಓವರ್‌ನಲ್ಲಿ ಒಟ್ಟು 32 ರನ್‌ಗಳನ್ನು ನೀಡುವ ಮೂಲಕ ದುಬಾರಿಯಾದರು. ಪಂದ್ಯ ಮುಗಿದ ಬಳಿಕ, ಶ್ರೀಲಂಕಾ ತಂಡದ ಮುಖ್ಯ ಕೋಚ್ ಸನತ್ ಜಯಸೂರ್ಯ ಅವರು ದುನಿತ್‌ಗೆ ಈ ದುಃಖದ ಸುದ್ದಿಯನ್ನು ತಿಳಿಸಿ ಸಮಾಧಾನಪಡಿಸಿದ ಭಾವುಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕ್ರೀಡಾ ಜಗತ್ತಿನ ಕಂಬನಿ
ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ಶ್ರೀಲಂಕಾದ ಮಾಜಿ ಕ್ರಿಕೆಟಿಗ ರಸೆಲ್ ಅರ್ನಾಲ್ಡ್, ಮೃತ ಸುರಂಗ ಅವರೊಂದಿಗಿನ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು. “ಸುರಂಗ ಕೂಡ ಒಬ್ಬ ಕ್ರಿಕೆಟಿಗರಾಗಿದ್ದರು. ನಾನು ಸೇಂಟ್ ಪೀಟರ್ಸ್ ಶಾಲೆಯ ನಾಯಕನಾಗಿದ್ದಾಗ, ಅವರು ಪ್ರಿನ್ಸ್ ಆಫ್ ವೇಲ್ಸ್ ಕಾಲೇಜು ತಂಡದ ನಾಯಕರಾಗಿದ್ದರು. ಶಾಲಾ ಕ್ರಿಕೆಟ್‌ನಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು,” ಎಂದು ಅರ್ನಾಲ್ಡ್ ಸ್ಮರಿಸಿದರು. ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ಮೊಹಮ್ಮದ್ ನಬಿ ಸೇರಿದಂತೆ ಹಲವು ಕ್ರಿಕೆಟಿಗರು ಸುರಂಗ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ತವರಿಗೆ ಮರಳಿದ ವೆಲ್ಲಾಲಗೆ
ತಂದೆಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದುನಿತ್ ವೆಲ್ಲಾಲಗೆ ತವರಿಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರು ಏಷ್ಯಾಕಪ್‌ನ ಮುಂದಿನ ಪಂದ್ಯಗಳಲ್ಲಿ ಭಾಗವಹಿಸುವುದು ಅನುಮಾನವಾಗಿದೆ.
ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ 169 ರನ್‌ಗಳ ಸವಾಲಿನ ಮೊತ್ತವನ್ನು ಶ್ರೀಲಂಕಾ ತಂಡವು 18.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಬೆನ್ನಟ್ಟಿ ಜಯ ಸಾಧಿಸಿತು.