ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ತನ್ನ ಸದಸ್ಯರಿಗೆ ಗುಡ್ ನ್ಯೂಸ್ ನೀಡಿದೆ. ಕ್ಷಿಪ್ರವಾಗಿ ಆನ್ ಲೈನ್ ಪಿಎಫ್ ಸೆಟಲ್ ಮೆಂಟ್, ಪಾಸ್ ಬುಕ್ ವೀಕ್ಷಣೆ ಸೇರಿ ಹತ್ತಾರು ಸೌಲಭ್ಯಗಳು ಹೊಸ ಸೇವೆಯಾದ “ಪಾಸ್ ಬುಕ್ ಲೈಟ್”ನಲ್ಲಿ ಇವೆ. “ಒಂದೇ ವೆಬ್ ಸೈಟ್ ಮೂಲಕ ಇಪಿಎಫ್ಒ ಸದಸ್ಯರು ಹಲವು ಸೇವೆಗಳನ್ನು ಪಡೆಯಲಿದ್ದಾರೆ” ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಂಡಾವೀಯ ತಿಳಿಸಿದ್ದಾರೆ.
ಇದುವರೆಗೆ ಇಪಿಎಫ್ಒ ವೆಬ್ ಪೋರ್ಟಲ್ ಗೆ ತೆರಳಿ, ಅಲ್ಲಿ ಸದಸ್ಯರ ವಿಭಾಗವನ್ನು ಆಯ್ಕೆ ಮಾಡಿಕೊಂಡು ಪಾಸ್ ಬುಕ್ ವೀಕ್ಷಣೆ ಮಾಡಬಹುದಿತ್ತು. ಆದರೆ, ಈಗ ಪಾಸ್ ಬುಕ್ ಲೈಟ್ ಮೂಲಕ ನೇರವಾಗಿ ಒಂದೇ ವೆಬ್ ಸೈಟ್ ಗೆ ತೆರಳಿ, ಪಾಸ್ ಬುಕ್ ವೀಕ್ಷಣೆ, ಕ್ಲೇಮ್ ಅರ್ಜಿಗಳ ಸಲ್ಲಿಕೆ ಸೇರಿ ಹಲವು ಸೇವೆಗಳನ್ನು ಪಡೆಯಬಹುದಾಗಿದೆ. ಇದರಿಂದ ಸದಸ್ಯರಿಗೆ ಕ್ಷಿಪ್ರವಾಗಿ ಸೇವೆ ದೊರೆಯುತ್ತದೆ. ಸೆಟಲ್ ಮೆಂಟ್ ಕೂಡ ಕ್ಷಿಪ್ರವಾಗಿ ಆಗಲಿದೆ.
ಇದುವರೆಗೆ ಒಬ್ಬ ಉದ್ಯೋಗಿಯು ಒಂದು ಕಂಪನಿ ಬಿಟ್ಟು ಇನ್ನೊಂದು ಕಂಪನಿ ಸೇರಿದಾಗ ತನ್ನ ಮೊದಲಿನ ಕಂಪನಿಯ ಪಿಎಫ್ ಮೊತ್ತವನ್ನು ಹೊಸ ಕಂಪನಿಯ ಪಿಎಫ್ ಖಾತೆಗೆ ಜಮೆ ಮಾಡಬೇಕು. ಇದಕ್ಕಾಗಿ ಉದ್ಯೋಗಿಯು ಫಾರ್ಮ್ ಕೆ ಅನ್ನು ಭರ್ತಿ ಮಾಡಬೇಕಿತ್ತು. ಉದ್ಯೋಗಿ ಮನವಿ ಮಾಡಿದರೆ ಮಾತ್ರ ಫಾರ್ಮ್ ಕೆ ಲಭ್ಯವಾಗುತ್ತಿತ್ತು. ಅದರಲ್ಲೂ, ಫಾರ್ಮ್ ಕೆ ಅನ್ನು ಪಿಎಫ್ ಕಚೇರಿಗೆ ಮಾತ್ರ ವರ್ಗಾಯಿಸಲಾಗುತ್ತಿತ್ತು.
ಆದರೆ, ಹೊಸ ಬದಲಾವಣೆ ಪ್ರಕಾರ, ಉದ್ಯೋಗಿಗೆ ಫಾರ್ಮ್ ಕೆ ವೆಬ್ ಸೈಟ್ ನಲ್ಲೇ ದೊರೆಯುತ್ತದೆ. ಇದಕ್ಕಾಗಿ ಆತ ಪ್ರತ್ಯೇಕವಾಗಿ ಮನವಿ ಮಾಡುವ ಪ್ರಮೇಯವೇ ಇರುವುದಿಲ್ಲ ಎಂದು ಕೂಡ ಮನ್ಸುಖ್ ಮಂಡಾವೀಯ ಮಾಹಿತಿ ನೀಡಿದ್ದಾರೆ. ಇದು ಕೂಡ ಉದ್ಯೋಗ ಬದಲಿಸುವವರಿಗೆ ಭಾರಿ ಅನುಕೂಲವಾಗುತ್ತದೆ ಎಂದೇ ಹೇಳಲಾಗುತ್ತಿದೆ.



















