ಬೆಂಗಳೂರು: ಫುಡ್ ಡೆಲಿವರಿ ನೆಪದಲ್ಲಿ ಬಂದು ವೃದ್ಧೆಯ ಕೈ-ಕಾಲು ಕಟ್ಟಿಹಾಕಿ 8 ಲಕ್ಷ ರೂ. ಹಣ ದರೋಡೆ ಮಾಡಿರುವ ಘಟನೆ ನಗರದ ಬನಶಂಕರಿಯಲ್ಲಿ ನಡೆದಿದೆ.
ಆರೋಪಿಗಳು ಫುಡ್ ಡೆಲಿವರಿ ಇದೆ ಎಂದು ಬಾಗಿಲ ಬೆಲ್ ಮಾಡಿದ್ದಾರೆ. ಡೋರ್ ಓಪನ್ ಮಾಡುತ್ತಿದ್ದಂತೆ ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ತಳ್ಳಿ ಒಳಗಡೆ ನುಗ್ಗಿದ್ದಾರೆ. ವೃದ್ಧೆಗೆ ಚಾಕು ತೋರಿಸಿ, ಕೈ-ಕಾಲು ಕಟ್ಟಿ ಹಾಕಿ ಎಂಟು ಲಕ್ಷ ದರೋಡೆ ಮಾಡಿದ್ದಾರೆ.
ಮನೆ ಡ್ರೈವರ್ ಕೆಲಸದಿಂದ ತೆಗೆದಿದ್ದಕ್ಕೆ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದ್ದು, ವೃದ್ಧೆ ಕನಕಪುಷ್ಪ ಎಂಬವರ ಮಗ ರಾಹುಲ್ ಬಳಿ ಮಡಿವಾಳ ಎಂಬಾತ ನಾಲ್ಕು ತಿಂಗಳಿನಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಭಾನುವಾರ ಬೆಳಗ್ಗೆ ಆತನ ಸಂಬಳ ಕ್ಲಿಯರ್ ಮಾಡಿ ಡ್ರೈವರ್ ಕೆಲಸದಿಂದ ತೆಗೆದು ಕಳುಹಿಸಿದ್ದರು.
ಇದರಿಂದ ಕೋಪಗೊಂಡ ಮಡಿವಾಳ, ವೃದ್ಧೆಯ ಮಗ ಹೊರಗೆ ಹೋಗಿರುವುನ್ನು ಖಾತರಿ ಪಡಿಸಿಕೊಂಡು ತನ್ನ ಮೂವರು ಸ್ನೇಹಿತರೊಂದಿಗೆ ಮನೆ ಬಳಿ ಬಂದು, ಡೆಲಿವರಿ ಬಾಯ್ ಎಂದು ಡೋರ್ ಬೆಲ್ ಮಾಡಿದ್ದಾರೆ. ಮೊದಲಿಗೆ ವೃದ್ಧೆ ಬಾಗಿಲು ತೆರೆಯುವುದಿಲ್ಲ. ನಾವು ಯಾವುದೇ ಆರ್ಡರ್ ಮಾಡಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ನಿಮ್ಮ ಮಗ ರಾಹುಲ್ ಎನ್ನುವವರು ಆರ್ಡರ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬಳಿಕ ವೃದ್ಧೆ ಬಾಗಿಲು ತೆಗೆಯುತ್ತಿದ್ದಂತೆ ಮಡಿವಾಳ ಸೇರಿ ನಾಲ್ವರು ಮನೆ ಒಳಗೆ ನುಗ್ಗಿದ್ದಾರೆ. ವೃದ್ಧೆ ಕನಕಪುಷ್ಪ ಕೈ-ಕಾಲು ಕಟ್ಟಿ ಕುತ್ತಿಗೆಗೆ ಚಾಕು ಇರಿದು, ಎಂಟು ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.
ಸದ್ಯ ವೃದ್ಧೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















