ಬೆಂಗಳೂರು: ನಗರದಲ್ಲಿ ಲೀಸ್‌ಗೆ ಮನೆಯನ್ನು ಪಡೆಯುವವರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಹೌದು, ಮನೆ ಲೀಸ್ ಗೆ ಕೊಡಿಸುತ್ತೇನೆ ಎಂದು ಹೇಳಿ ಹತ್ತಾರು ಜನರಿಗೆ ಭಾರೀ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ಹೆಸರಿನಲ್ಲಿ ವಿವೇಕ್ ಕೇಸವನ್ ಎಂಬ ವ್ಯಕ್ತಿಯೊಬ್ಬ ಅನೇಕ ಕುಟುಂಬಗಳಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದು ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಮೊದಲಿಗೆ ಬೊಂಬಾಟ್ ಫ್ಲ್ಯಾಟ್ ನೀಡ್ತಿನಿ ಕ್ಯಾಶ್ ಕೊಡಿ ಎಂದು ಕೇಳಿ ಲಕ್ಷಗಟ್ಟಲೆ ಹಣ ಪಡೆದು ವೇಯ್ಟ್ ಮಾಡಿ ಅಂತಾನೆ, ಲೀಜ್ ಹಾಗೂ ಬಾಡಿಗೆ ಲೆಕ್ಕದಲ್ಲಿ ಫ್ಲ್ಯಾಟ್ ನೀಡೋದಾಗಿ ನಂಬಿಸುತ್ತಾನೆ, ಮೂರು ಅಥವಾ ಐದು ವರ್ಷ ಫ್ಲ್ಯಾಟ್ ಲೀಸ್ ಕೊಡಿಸ್ತೀನಿ ಎಂದು 15 ರಿಂದ 25 ಲಕ್ಷ ಪ್ರತೀ ಐಟಿ ಉದ್ಯೋಗಿಗಳಿಂದ ವಸೂಲಿ ಮಾಡಿದ್ದಾನೆ. ಇದೀಗ ಒಟ್ಟು 400 ಸಾಫ್ಟ್ ವೇರ್ ಇಂಜಿನಿಯರ್ ಗಳ ಕೈಯಿಂದ ಲಕ್ಷಾಂತರ ರೂಪಾಯಿ ಕಿತ್ತಿದ್ದಾನೆ. ಒಂದೇ ತಿಂಗಳಲ್ಲಿ 60 ಕೋಟಿಗೂ ಮೀರಿ ಕಲೆಕ್ಷನ್ ಮಾಡ್ಕೊಂಡು ಆರೋಪಿ ವಿವೇಕ್ ಕೇಸವನ್ ಎಸ್ಕೇಪ್ ಆಗಿದ್ದಾನೆ ಎಂದು ವಂಚಿತರು ದೂರು ನೀಡಿದ್ದಾರೆ.
ಸದ್ಯ ಆರೋಪಿ ವಿವೇಕ್ ಕೇಶವನ್ ಹಾಗೂ ಆತನ ಸಹಚರರ ವಿರುದ್ಧ ಪರಪ್ಪನ ಅಗ್ರಹಾರ, ಹೆಬ್ಬಗೋಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗಳಲ್ಲಿ ವಿವಿಧ ಎಫ್ಐಆರ್‌ಗಳು ದಾಖಲಾಗಿವೆ.