ರಾಂಚಿ: ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ಸೋಮವಾರ ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಬರೋಬ್ಬರಿ 1 ಕೋಟಿ ರೂ. ಬಹುಮಾನ ಹೊತ್ತಿದ್ದ ಸಿಪಿಐ (ಮಾವೋವಾದಿ) ಸಂಘಟನೆಯ ಉನ್ನತ ಕಮಾಂಡರ್ ಸೇರಿದಂತೆ ಮೂವರು ಪ್ರಮುಖ ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತನಾದ ಕಮಾಂಡರ್‌ನನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ ಸಹದೇವ್ ಸೊರೆನ್ ಎಂದು ಗುರುತಿಸಲಾಗಿದೆ. ಈತ ಪೂರ್ವ ಭಾರತದಲ್ಲಿ ಮೋಸ್ಟ್ ವಾಂಟೆಡ್ ಮಾವೋವಾದಿ ನಾಯಕರಲ್ಲಿ ಒಬ್ಬನಾಗಿದ್ದನು.

ಜಂಟಿ ಕಾರ್ಯಾಚರಣೆ
ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕೋಬ್ರಾ ಬೆಟಾಲಿಯನ್, ಗಿರಿದಿಹ್ ಪೊಲೀಸ್ ಮತ್ತು ಹಜಾರಿಬಾಗ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ನಕ್ಸಲರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ. ಗಿರಿದಿಹ್-ಬೊಕಾರೊ ಗಡಿಯ ಸಮೀಪ, ತತಿಜಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಕರಂಡಿ ಗ್ರಾಮದಲ್ಲಿ ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ.
ಹತರಾದವರೆಲ್ಲರೂ ಪ್ರಮುಖ ನಾಯಕರು
ಎನ್‌ಕೌಂಟರ್‌ನಲ್ಲಿ ಹತರಾದ ಇತರ ಇಬ್ಬರು ಮಾವೋವಾದಿ ನಾಯಕರನ್ನು ಸಹ ಗುರುತಿಸಲಾಗಿದೆ. ಅವರೆಂದರೆ:
ರಘುನಾಥ್ ಹೆಂಬ್ರಮ್ (ಚಂಚಲ್): ಈತ ಬಿಹಾರ-ಜಾರ್ಖಂಡ್ ವಿಶೇಷ ಪ್ರಾದೇಶಿಕ ಸಮಿತಿಯ ಸದಸ್ಯನಾಗಿದ್ದ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ ಈ ಹಿಂದೆಯೇ 25 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು.
ಬೀರ್ಸೆನ್ ಗಂಜು (ರಾಮ್‌ಖೇಲಾವನ್): ಈತ ವಲಯ ಸಮಿತಿಯ ಸದಸ್ಯನಾಗಿದ್ದು, 10 ಲಕ್ಷ ರೂ. ಬಹುಮಾನವನ್ನು ಹೊತ್ತಿದ್ದನು.
ಎನ್‌ಕೌಂಟರ್ ನಂತರ ಮೂವರು ಬಂಡುಕೋರರ ಮೃತದೇಹಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳದಿಂದ ಮೂರು ಎಕೆ-47 ರೈಫಲ್‌ಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



















