ಗುವಾಹಟಿ: ಅಸ್ಸಾಂನಲ್ಲಿ ಭಾನುವಾರ ಸಂಜೆ 5.8 ತೀವ್ರತೆಯ ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಆಸ್ಪತ್ರೆಯೊಂದರಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಶ್ಲಾಘನೆಗೆ ಪಾತ್ರವಾಗಿದೆ. ಭೂಕಂಪದ ತೀವ್ರತೆಗೆ ಆಸ್ಪತ್ರೆಯ ಕಟ್ಟಡ ನಡುಗುತ್ತಿದ್ದರೂ, ತಮ್ಮ ಪ್ರಾಣದ ಹಂಗು ತೊರೆದು ಇಬ್ಬರು ದಾದಿಯರು ನವಜಾತ ಶಿಶುಗಳಿಗೆ ರಕ್ಷಾಕವಚವಾಗಿ ನಿಂತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ಈಗ ವೈರಲ್ ಆಗಿದೆ. ಅಲ್ಲದೇ ದಾದಿಯರ ಧೈರ್ಯಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ದಾದಿಯರ ಸಮಯ ಪ್ರಜ್ಞೆ
ಈ ಘಟನೆ ರಾಜ್ಯದ ನಾಗಾಂವ್ ಜಿಲ್ಲೆಯ ಆದಿತ್ಯ ನರ್ಸಿಂಗ್ ಹೋಮ್ ಎಂಬ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಭಾನುವಾರ ಸಂಜೆ ಸುಮಾರು 4:40ಕ್ಕೆ ಭೂಮಿ ಕಂಪಿಸಲು ಆರಂಭಿಸಿತ್ತು. ಏಕಾಏಕಿ ವಿದ್ಯುತ್ ಪೂರೈಕೆಯಲ್ಲಿ ಕೂಡ ವ್ಯತ್ಯಯವಾಯಿತು. ಅಷ್ಟರಲ್ಲೇ ಎಲ್ಲರೂ ಭಯಪಟ್ಟು ಆಸ್ಪತ್ರೆಯಿಂದ ಹೊರಗೆ ಓಡುವಲ್ಲಿ ತಲ್ಲೀನರಾದರೆ, ಇಬ್ಬರು ದಾದಿಯರು ಮಾತ್ರ ತಕ್ಷಣವೇ ಕಾರ್ಯಪ್ರವೃತ್ತರಾಗಿ ನವಜಾತ ಶಿಶುಗಳಿದ್ದ ಘಟಕಕ್ಕೆ ಓಡಿಹೋಗಿ ಅವುಗಳನ್ನು ರಕ್ಷಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ.
ಭೂಕಂಪದ ವಿವರ
ಭಾನುವಾರ ಸಂಜೆ ಈಶಾನ್ಯದ ಹಲವು ಭಾಗಗಳು ಮತ್ತು ಪಶ್ಚಿಮ ಬಂಗಾಳದ ಗಡಿ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿತ್ತು. ಅಧಿಕಾರಿಗಳ ಪ್ರಕಾರ, ಮೊದಲ ಕಂಪನವು 5.8 ತೀವ್ರತೆಯಲ್ಲಿ ಸಂಜೆ 4:41ಕ್ಕೆ ದಾಖಲಾಗಿದೆ. ನಂತರ 4:58ಕ್ಕೆ 3.1 ತೀವ್ರತೆಯ ಎರಡನೇ ಕಂಪನ, 5:21ಕ್ಕೆ 2.9 ತೀವ್ರತೆಯ ಮೂರನೇ ಕಂಪನ ಮತ್ತು ಸಂಜೆ 6:11ಕ್ಕೆ 2.7 ತೀವ್ರತೆಯ ನಾಲ್ಕನೇ ಕಂಪನ ಸಂಭವಿಸಿದೆ. ಈ ಪೈಕಿ ಮೂರು ಭೂಕಂಪಗಳ ಕೇಂದ್ರಬಿಂದು ಉದಲ್ಗುರಿ ಜಿಲ್ಲೆಯಾಗಿತ್ತು ಎಂಬುದು ಗಮನಾರ್ಹ.
ಅಲ್ಪ ಹಾನಿ, ಸಾವು ನೋವು ಇಲ್ಲ
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಉದಲ್ಗುರಿಯಲ್ಲಿ ಹಾಸ್ಟೆಲ್‌ನ ಮೇಲ್ಛಾವಣಿ ಕುಸಿದು ಇಬ್ಬರು ಬಾಲಕಿಯರು ಗಾಯಗೊಂಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಅಮ್ಗುರಿ ಪ್ರದೇಶದಲ್ಲಿ ಮನೆಯೊಂದರ ಮೇಲ್ಛಾವಣಿ ಕುಸಿದಿದೆ. ಸೋನಿತ್‌ಪುರದಲ್ಲಿ ಎರಡು ಮನೆಗಳು ಮತ್ತು ಒಂದು ಅಂಗಡಿಗೆ ಭಾಗಶಃ ಹಾನಿಯಾಗಿದ್ದರೆ, ವಿಶ್ವನಾಥ್ ಜಿಲ್ಲೆಯಲ್ಲಿ ಕೆಲವು ಮನೆಗಳ ಗೋಡೆಗಳಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಂಡಿವೆ.