ವಾಷಿಂಗ್ಟನ್: ಅಮೆರಿಕದ ಡಲ್ಲಾಸ್‌ನಲ್ಲಿ ಕಳೆದ ವಾರ ಕರ್ನಾಟಕದ ಚಂದ್ರಮೌಳಿ ನಾಗಮಲ್ಲಯ್ಯ ಅವರನ್ನು ಅಕ್ರಮ ಕ್ಯೂಬಾ ವಲಸಿಗನೊಬ್ಬ ಶಿರಚ್ಛೇದ ಮಾಡಿ ಹತ್ಯೆಗೈದ ಘಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಆರೋಪಿಯ ವಿರುದ್ಧ “ಘೋರ ಕೊಲೆ” ಆರೋಪದಡಿ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, “ಅಮೆರಿಕವನ್ನು ಮತ್ತೆ ಸುರಕ್ಷಿತವಾಗಿಸುವುದಾಗಿ” ಮತ್ತು ಅಕ್ರಮ “ವಲಸಿಗ ಅಪರಾಧಿಗಳ” ಬಗ್ಗೆ ತಮ್ಮ ಆಡಳಿತವು “ಮೃದು ಧೋರಣೆ” ತಾಳುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ.
ತಮ್ಮ ‘ಟ್ರುತ್ ಸೋಶಿಯಲ್’ ವೇದಿಕೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಟ್ರಂಪ್, “ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದ ಚಂದ್ರ ನಾಗಮಲ್ಲಯ್ಯ ಅವರನ್ನು, ನಮ್ಮ ದೇಶದಲ್ಲಿ ಇರಲೇಬಾರದಾಗಿದ್ದ ಕ್ಯೂಬಾದ ಅಕ್ರಮ ವಲಸಿಗನೊಬ್ಬ ಪತ್ನಿ ಮತ್ತು ಮಗನ ಎದುರೇ ಬರ್ಬರವಾಗಿ ಶಿರಚ್ಛೇದ ಮಾಡಿರುವ ಭಯಾನಕ ವರದಿ ಬಗ್ಗೆ ನನಗೆ ತಿಳಿದಿದೆ. ಈ ಅಕ್ರಮ ವಲಸಿಗ ಅಪರಾಧಿಗಳ ಬಗ್ಗೆ ಮೃದುವಾಗಿ ವರ್ತಿಸುವ ಸಮಯ ನನ್ನ ಆಡಳಿತದಲ್ಲಿ ಮುಗಿದುಹೋಗಿದೆ. ನಿಶ್ಚಿಂತೆಯಿಂದಿರಿ,” ಎಂದು ಹೇಳಿದ್ದಾರೆ.
ಬೈಡನ್ ಆಡಳಿತದ ವಿರುದ್ಧ ದೂಷಣೆ
ಕ್ರಿಮಿನಲ್ ಹಿನ್ನೆಲೆಯುಳ್ಳ ಆರೋಪಿ ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್‌ನನ್ನು ಬಿಡುಗಡೆ ಮಾಡಿದ್ದಕ್ಕಾಗಿ ಹಿಂದಿನ ಬೈಡನ್ ಆಡಳಿತವನ್ನು ಟ್ರಂಪ್ ದೂಷಿಸಿದ್ದಾರೆ. “ಈ ವ್ಯಕ್ತಿಯನ್ನು ಈ ಹಿಂದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ವಾಹನ ಕಳ್ಳತನ, ಮತ್ತು ಅಕ್ರಮ ಬಂಧನದಂತಹ ಭಯಾನಕ ಅಪರಾಧಗಳಿಗಾಗಿ ಬಂಧಿಸಲಾಗಿತ್ತು. ಅಂತಹ ದುಷ್ಟ ವ್ಯಕ್ತಿ ತಮ್ಮ ದೇಶದಲ್ಲಿರುವುದು ಬೇಡ ಎಂದು ಕ್ಯೂಬಾ ಬಯಸಿತ್ತು. ಆದರೆ, ಅಸಮರ್ಥ ಜೋ ಬೈಡನ್ ಸರ್ಕಾರವು ಇಂಥ ಕ್ರೂರಿಯನ್ನು ಬಿಡುಗಡೆ ಮಾಡಿತು,” ಎಂದು ಟ್ರಂಪ್ ಆರೋಪಿಸಿದ್ದಾರೆ.
ಸೆಪ್ಟೆಂಬರ್ 10 ರಂದು, ಡಲ್ಲಾಸ್‌ನ ಸ್ಯಾಮುಯೆಲ್ ಬೌಲೆವಾರ್ಡ್‌ನಲ್ಲಿರುವ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ಕ್ಯೂಬಾ ವಲಸಿಗ 37 ವರ್ಷದ ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್, 41 ವರ್ಷದ ನಾಗಮಲ್ಲಯ್ಯ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಶಿರಚ್ಛೇದ ಮಾಡಿದ್ದ. ನಾಗಮಲ್ಲಯ್ಯ ಅವರ ಶಿರಚ್ಛೇದ ಮಾಡಿ, ಅವರ ತಲೆಯನ್ನು ಫುಟ್ಬಾಲ್‌ನಂತೆ ಒದ್ದಿದ್ದ ಕ್ರೂರಿ, ನಂತರ ಅದನ್ನು ಕಸದ ತೊಟ್ಟಿಯಲ್ಲಿ ಎಸೆದಿದ್ದ. ಮೋಟೆಲ್‌ನ ಸಿಸಿಟಿವಿಯಲ್ಲಿ, ಮಾರ್ಟಿನೆಜ್ ತನ್ನ ಪತ್ನಿ ಮತ್ತು 18 ವರ್ಷದ ಮಗನ ಮುಂದೆ ನಾಗಮಲ್ಲಯ್ಯ ಅವರನ್ನು ಮಚ್ಚಿನಿಂದ ಅಟ್ಟಾಡಿಸಿ ಹಲ್ಲೆ ಮಾಡಿ, ಶಿರಚ್ಛೇದ ಮಾಡುವ ಸಂಪೂರ್ಣ ದೃಶ್ಯ ಸೆರೆಯಾಗಿದೆ.
ಶುಕ್ರವಾರ, ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS), ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಸಂಸ್ಥೆಯು ದಾಳಿಕೋರನನ್ನು ದೇಶದಿಂದ “ಹೊರಹಾಕುವ” ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ. ಡಿಎಚ್‌ಎಸ್ ಸಹಾಯಕ ಸಚಿವ ಟ್ರಿಶಿಯಾ ಮೆಕ್‌ಲಾಫ್ಲಿ ಕೂಡ ಬೈಡನ್ ಆಡಳಿತವನ್ನು ದೂಷಿಸಿದ್ದು, “ಬೈಡನ್ ಆಡಳಿತವು ಈ ಕ್ರಿಮಿನಲ್ ಅಕ್ರಮ ವಲಸಿಗನನ್ನು ನಮ್ಮ ದೇಶಕ್ಕೆ ಬಿಡುಗಡೆ ಮಾಡದಿದ್ದರೆ ಈ ಭೀಕರ, ಅನಾಗರಿಕ ಹತ್ಯೆಯನ್ನು ಸಂಪೂರ್ಣವಾಗಿ ತಡೆಯಬಹುದಿತ್ತು,” ಎಂದು ಹೇಳಿದ್ದಾರೆ. ಮಾರ್ಟಿನೆಜ್‌ನನ್ನು ಜನವರಿ 13, 2025 ರಂದು ಬೈಡನ್ ಆಡಳಿತದ ಅಡಿಯಲ್ಲಿ ಮೇಲ್ವಿಚಾರಣಾ ಆದೇಶದ ಮೇಲೆ ಬಿಡುಗಡೆ ಮಾಡಲಾಗಿತ್ತು.



















