ನಾಗಪುರ: ಎಷ್ಟೋ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ ಎಂದೇ ನಂಬಲಾಗಿದ್ದ ವ್ಯಕ್ತಿಯೊಬ್ಬರು ಹಠಾತ್ ನಿಮ್ಮ ಮುಂದೆ ಪ್ರತ್ಯಕ್ಷವಾದರೆ ನಿಮಗೆ ಹೇಗಾಗಬೇಡ?
ಇಂಥದ್ದೊಂದು ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಬರೋಬ್ಬರಿ 36 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದ್ದ 58 ವರ್ಷದ ಮಹಿಳೆಯೊಬ್ಬರು ಇದೀಗ ತಮ್ಮ ಮನೆಗೆ ವಾಪಸ್ ಬಂದಿದ್ದಾರೆ. 1989ರಲ್ಲಿ ಪತಿಯ ವಿಪರೀತ ಕುಡಿತ ಹಾಗೂ ಅತ್ತೆಯ ಕಿರುಕುಳದಿಂದ ಬೇಸತ್ತು, ಗರ್ಭಿಣಿಯಾಗಿದ್ದಾಗಲೇ ಮನೆ ತೊರೆದಿದ್ದ ಈ ಮಹಿಳೆ, ಮೂರು ದಶಕಗಳ ಬಳಿಕ ತಮ್ಮ ಕುಟುಂಬವನ್ನು ಸೇರಿದ್ದಾರೆ.
ಕಣ್ಣೀರಿನ ಕಥೆ
ನಾಗಪುರದ ಜೈತಾಲಾ ಪ್ರದೇಶದ ನಿವಾಸಿಯಾಗಿದ್ದ ಈ ಮಹಿಳೆ, ಮನೆ ಬಿಟ್ಟು ಹೋಗುವಾಗ ಪತಿ, ಮಗ ಮತ್ತು ಮಗಳನ್ನು ಅಗಲಿದ್ದರು. ದುರದೃಷ್ಟವಶಾತ್, ಆರು ವರ್ಷಗಳ ಹಿಂದೆ ಅವರ ಪತಿ ನಿಧನರಾದರೆ, ಎರಡು ವರ್ಷಗಳ ಹಿಂದೆ ಮಗನೂ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ಅವರು ಬಿಟ್ಟು ಹೋಗಿದ್ದ ಮಗಳಿಗೆ ಈಗ 38 ವರ್ಷ.
36 ವರ್ಷಗಳ ಸುದೀರ್ಘ ಪಯಣ
36 ವರ್ಷಗಳ ಕಾಲ ಅವರ ಕುಟುಂಬಸ್ಥರು ಆಕೆ ಮೃತಪಟ್ಟಿದ್ದಾಳೆಂದೇ ಭಾವಿಸಿದ್ದರು. 2018ರಲ್ಲಿ ಅಧಿಕಾರಿಗಳು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಆಶ್ರಯಧಾಮವೊಂದರಲ್ಲಿ ಆಕೆಯನ್ನು ಪತ್ತೆಹಚ್ಚಿದರು. ಈ ನಡುವೆ, ಅವರು ಮತ್ತೋರ್ವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗಳು ಬಂಗಾಳಿ ಮಾತನಾಡುತ್ತಾ ಆಶ್ರಮದಲ್ಲೇ ಬೆಳೆದಿದ್ದಳು. 2024ರಲ್ಲಿ ತಾಯಿ-ಮಗಳನ್ನು ಮುಂಬೈನ ಕಸ್ತೂರ್ಬಾ ಮಹಿಳಾ ಗೃಹಕ್ಕೆ, ನಂತರ 2025ರಲ್ಲಿ ನಾಗಪುರದ ಸರ್ಕಾರಿ ಪ್ರಿಯದರ್ಶಿನಿ ಮಹಿಳಾ ಗೃಹಕ್ಕೆ ಸ್ಥಳಾಂತರಿಸಲಾಯಿತು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರನ್ನು ಪ್ರಾದೇಶಿಕ ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸುಳಿವು ಸಿಕ್ಕಿದ್ದು ಹೇಗೆ?
ಅಲ್ಲಿನ ಸಮಾಜ ಸೇವಾ ಅಧೀಕ್ಷಕಿ ಕುಂದಾ ಬಿಡ್ಕರ್ ಮತ್ತು ಮನೋವೈದ್ಯ ಡಾ. ಪಂಕಜ್ ಬಾಗ್ಡೆ ಅವರು ಆಕೆಯ ಗುರುತು ಪತ್ತೆಹಚ್ಚಲು ಮುಂದಾದರು. ಒಮ್ಮೆ ಆಕೆ ತನ್ನ ತಂದೆ ಪೋಸ್ಟ್‌ಮಾಸ್ಟರ್ ಆಗಿದ್ದ ‘ಬುಟಿಬೋರಿ’ ಎಂಬ ಸ್ಥಳವನ್ನು ಅಸ್ಪಷ್ಟವಾಗಿ ನೆನಪಿಸಿಕೊಂಡಿದ್ದರು. ಈ ಸುಳಿವನ್ನೇ ಹಿಡಿದು ಅಂಚೆ ಕಚೇರಿಯ ದಾಖಲೆಗಳನ್ನು ಪರಿಶೀಲಿಸಿದಾಗ, ಆಕೆಯ ಅತ್ತೆ-ಮಾವನ ಮನೆಯಿದ್ದ ‘ಜೈತಾಲಾ’ ಪ್ರದೇಶದ ಉಲ್ಲೇಖ ಸಿಕ್ಕಿತು. ಪೊಲೀಸರ ಸಹಾಯದಿಂದ ಅಂತಿಮವಾಗಿ ಕುಟುಂಬವನ್ನು ಪತ್ತೆಹಚ್ಚಲಾಯಿತು. ಈಗ ತಾಯಿ-ಮಗಳ ಭಾವನಾತ್ಮಕ ಪುನರ್ಮಿಲನವಾಗಿದ್ದು, ಇದಕ್ಕೆ ಅಧಿಕಾರಿಗಳು ಸಾಕ್ಷಿಯಾದರು.