ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಇಲಾಖೆ ಹಾಗೂ ಬೈಕ್ ಟ್ಯಾಕ್ಸಿ ಚಾಲಕರ ಜಟಾಪಟಿ ಮುಂದುವರೆದಿದ್ದು, ಸೆ.22ಕ್ಕೆ ಬೈಕ್ ಟ್ಯಾಕ್ಸಿ ಭವಿಷ್ಯ ನಿರ್ಧಾರವಾಗಲಿದೆ.
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಕಾರ್ಯಾಚರಣೆ ಬಗ್ಗೆ ತನ್ನ ನಿಲುವು ತಿಳಿಸಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಬೈಕ್ ಟ್ಯಾಕ್ಸಿ ಸಾಧಕ-ಭಾದಕಗಳ ಬಗ್ಗೆ ವರದಿ ಸಲ್ಲಿಸಲು ಸರ್ಕಾರ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದೆ. ಈ ಕಮಿಟಿಯನ್ನು ಸರ್ಕಾರದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. 11 ಜನ ಕಮಿಟಿಯಲ್ಲಿದ್ದಾರೆ.
ಈ ಕಮಿಟಿಯು ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯ ಸಾಧಕ-ಭಾದಕಗಳ ಕುರಿತು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ವರದಿಯ ಆಧಾರದ ಮೇಲೆ ಸಾರಿಗೆ ಇಲಾಖೆ ಅಥವಾ ಸರ್ಕಾರ ಸೆಪ್ಟೆಂಬರ್ 22ರಂದು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಬಗ್ಗೆ ನಿಯಮ ರೂಪಿಸಿ ತನ್ನ ನಿಲುವು ಪ್ರಕಟಿಸಲಿದೆ. ಅಂದಾಜಿನಂತೆ ಬೆಂಗಳೂರಲ್ಲಿ ಸುಮಾರು 1.20 ಲಕ್ಷ ಖಾಸಗಿ ಬೈಕ್ ಸವಾರರು ಬೈಕ್ ಟ್ಯಾಕ್ಸಿ ಮಾಡುತ್ತಿದ್ದಾರೆ.