Iಕಠ್ಮಂಡು: ನೇಪಾಳ ಸರ್ಕಾರವನ್ನೇ ಉರುಳಿಸಿದ ಜೆನ್-ಝೀ(ಯುವ ಸಮೂಹ) ಪ್ರತಿಭಟನೆ ವೇಳೆ ಉದ್ರಿಕ್ತ ಪ್ರತಿಭಟನಾಕಾರರು ಹೋಟೆಲ್ ವೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ, ಉತ್ತರ ಪ್ರದೇಶದ ಘಾಜಿಯಾಬಾದ್ ಮೂಲದ 57 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಘಾಜಿಯಾಬಾದ್‌ನ ರಾಜೇಶ್ ಗೋಲಾ ಎಂದು ಗುರುತಿಸಲಾಗಿದೆ. ಅವರು ತಮ್ಮ ಪತಿ ರಾಮ್‌ವೀರ್ ಸಿಂಗ್ ಗೋಲಾ ಅವರೊಂದಿಗೆ ಸೆಪ್ಟೆಂಬರ್ 7ರಂದು ನೇಪಾಳಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ದಂಪತಿ ಕಠ್ಮಂಡುವಿನ ಹಯಾತ್ ರೀಜೆನ್ಸಿ ಹೋಟೆಲ್‌ನಲ್ಲಿ ತಂಗಿದ್ದರು.
ನೇಪಾಳದಲ್ಲಿ ‘ಜೆನ್ ಝೆಡ್’ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು ತೀವ್ರಗೊಂಡಾಗ, ಸೆಪ್ಟೆಂಬರ್ 9ರಂದು ಪ್ರತಿಭಟನಾಕಾರರು ಹೋಟೆಲ್‌ಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದಾಗಿ ತಪ್ಪಿಸಿಕೊಳ್ಳಲು ಬೇರೆ ದಾರಿಗಳಿಲ್ಲದಿದ್ದಾಗ, ರಕ್ಷಣಾ ಸಿಬ್ಬಂದಿ ಕೆಳಗೆ ಹಾಸಿಗೆಗಳನ್ನು ಹಾಕಿ ಕಿಟಕಿಯಿಂದ ಕೆಳಗೆ ಹಾರುವಂತೆ ಸೂಚಿಸಿದ್ದಾರೆ. ಈ ವೇಳೆ, ರಾಜೇಶ್ ಗೋಲಾ ಮತ್ತು ಅವರ ಪತಿ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದ್ದಾರೆ. ಪತಿ ರಾಮ್‌ವೀರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ರಾಜೇಶ್ ಗೋಲಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕುಟುಂಬದವರ ಆಕ್ರಂದನ
ಈ ಕುರಿತು ಮಾತನಾಡಿರುವ ದಂಪತಿಯ ಪುತ್ರ ವಿಶಾಲ್, “ತಪ್ಪಿಸಿಕೊಳ್ಳುವಾಗ ನನ್ನ ತಾಯಿ ತಂದೆಯಿಂದ ಬೇರ್ಪಟ್ಟಿದ್ದರು. ಒಂದು ವೇಳೆ ಅವರು ನನ್ನ ತಂದೆಯ ಜೊತೆಗಿದ್ದಿದ್ದರೆ ಬದುಕುಳಿಯುತ್ತಿದ್ದರು,” ಎಂದು ಕಣ್ಣೀರು ಹಾಕಿದ್ದಾರೆ.
ನೇಪಾಳದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ಯುವಜನರು ಆರಂಭಿಸಿದ ಪ್ರತಿಭಟನೆಗಳು ಹಿಂಸಾರೂಪ ಪಡೆದಿದ್ದವು. ಈ ವೇಳೆ, ಪ್ರತಿಭಟನಾಕಾರರು ಸಂಸತ್ ಭವನ, ಸರ್ಕಾರಿ ಕಚೇರಿಗಳು ಮತ್ತು ಹಿಲ್ಟನ್ ಹೋಟೆಲ್ ಸೇರಿದಂತೆ ಹಲವು ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದರು. ಈ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ, ಅಧ್ಯಕ್ಷ ಪೌಡೆಲ್ ರಾಜೀನಾಮೆ ನೀಡಿದ್ದರು.



















