ಕಠ್ಮಂಡು: ನೇಪಾಳದಲ್ಲಿ ನಡೆದ ಬೃಹತ್ ‘ಜೆನ್-ಝೆಡ್’ ದಂಗೆಯ ಫಲವೆಂಬಂತೆ ಕೆ.ಪಿ. ಶರ್ಮಾ ಓಲಿ ಸರ್ಕಾರ ಪತನಗೊಂಡ ನಂತರ, ದೇಶದ ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಲು ಒಪ್ಪಿಕೊಂಡಿರುವ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ ಅವರು ಭಾರತದ ಬಗ್ಗೆ ಸಕಾರಾತ್ಮಕ ಮಾತುಗಳನ್ನು ಆಡಿದ್ದಾರೆ. ಭಾರತದ ಬೆಂಬಲವನ್ನು ಶ್ಲಾಘಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
“ನಾನು ಮೋದಿಜಿಯವರಿಗೆ ನಮಸ್ಕರಿಸುತ್ತೇನೆ. ಮೋದಿಜಿಯವರ ಬಗ್ಗೆ ನನಗೆ ತುಂಬಾ ಒಳ್ಳೆಯ ಅಭಿಪ್ರಾಯವಿದೆ,” ಎಂದು ಅವರು ಹೇಳಿದ್ದಾರೆ. ಜೊತೆಗೆ “ನೇಪಾಳದಲ್ಲಿ ಜೆನ್-ಝೆಡ್ ಗುಂಪು ಮುನ್ನಡೆಸಿರುವ ಚಳವಳಿಯ ನಂತರದಲ್ಲಿ ಈಗ ನನ್ನ ಮೇಲೆ ವಿಶ್ವಾಸವಿಟ್ಟು ಅಲ್ಪಾವಧಿಗೆ ಸರ್ಕಾರವನ್ನು ಮುನ್ನಡೆಸುವ ಹೊಣೆ ನೀಡಿದ್ದಾರೆ,” ಎಂದೂ ಅವರು ಹೇಳಿದ್ದಾರೆ.
ಸುಶೀಲಾ ಕಾರ್ಕಿ ಆದ್ಯತೆಗಳು
ಸರ್ಕಾರವನ್ನು ಮುನ್ನಡೆಸಲು ಆಯ್ಕೆಯಾದರೆ, ಪ್ರತಿಭಟನೆಗಳ ಸಮಯದಲ್ಲಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸುವುದು ತಮ್ಮ ಮೊದಲ ಆದ್ಯತೆಯಾಗಿರುತ್ತದೆ ಎಂದು ಕಾರ್ಕಿ ಹೇಳಿದ್ದಾರೆ. ಪ್ರತಿಭಟನಾಕಾರರ ಮೇಲೆ ಸೇನೆ ಗುಂಡು ಹಾರಿಸಿದಾಗ ಕನಿಷ್ಠ 30 ಜನರು ಸಾವನ್ನಪ್ಪಿ, 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. “ನಮ್ಮ ತಕ್ಷಣದ ಗಮನವು ಪ್ರತಿಭಟನೆಯ ಸಮಯದಲ್ಲಿ ಮರಣ ಹೊಂದಿದ ಯುವಜನರ ಕಡೆಗೇ ಇರುತ್ತದೆ,” ಎಂದು ಅವರು ತಿಳಿಸಿದ್ದಾರೆ.
ನೇಪಾಳದ ಪ್ರಕ್ಷುಬ್ಧ ರಾಜಕೀಯ ಇತಿಹಾಸವನ್ನು ಸ್ಮರಿಸಿರುವ ಕಾರ್ಕಿ, “ನೇಪಾಳದಲ್ಲಿ ಹಿಂದಿನಿಂದಲೂ ಸಮಸ್ಯೆಗಳಿವೆ. ಈಗ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ನಾವು ನೇಪಾಳದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ. ದೇಶಕ್ಕೆ ನಾವು ಹೊಸ ಆರಂಭವನ್ನು ನೀಡಲು ಪ್ರಯತ್ನಿಸುತ್ತೇವೆ,” ಎಂದು ಹೇಳಿದ್ದಾರೆ. ಇದೇ ವೇಳೆ, ಭಾರತದ ಐತಿಹಾಸಿಕ ಪಾತ್ರದ ಬಗ್ಗೆ ಮಾತನಾಡಿದ ಅವರು, “ಭಾರತದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಇದೆ. ಭಾರತವು ಯಾವಾಗಲೂ ನೇಪಾಳಕ್ಕೆ ದೊಡ್ಡ ಸಹಾಯವನ್ನು ನೀಡಿದೆ,” ಎಂದಿದ್ದಾರೆ.
ಸುಶೀಲಾ ಕಾರ್ಕಿ ಹಿನ್ನೆಲೆ
72 ವರ್ಷದ ಕಾರ್ಕಿ ಅವರು 2016 ರಿಂದ 2017 ರವರೆಗೆ ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ “ಶೂನ್ಯ ಸಹಿಷ್ಣುತೆ” ನಿಲುವು ಮತ್ತು ನಿರ್ಭೀತ ಹಾಗೂ ಸ್ವತಂತ್ರ ನ್ಯಾಯಾಧೀಶರೆಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.
‘ಜೆನ್-ಝೆಡ್’ ಕ್ರಾಂತಿ
ಇತ್ತೀಚೆಗಷ್ಟೇ ನೇಪಾಳದಲ್ಲಿ ಯುವಕರ ನೇತೃತ್ವದಲ್ಲಿ ನಡೆದ ‘ಜೆನ್-ಝೆಡ್ ಕ್ರಾಂತಿ’ಯು ದೇಶದ ಸರ್ಕಾರವನ್ನೇ ಪತನಗೊಳಿಸಿದೆ. ಯುವ ಸಮೂಹದ ದಂಗೆಯ ತೀವ್ರತೆಗೆ ಮಣಿದು ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದರೆ, ಸಚಿವರೆಲ್ಲರೂ ವಿದೇಶಗಳಿಗೆ ಪಲಾಯನ ಮಾಡಿದ್ದಾರೆ. ಸರ್ಕಾರವು ಸಾಮಾಜಿಕ ಮಾಧ್ಯಮಗಳ ಮೇಲೆ ಹೇರಿದ್ದ ನಿಷೇಧಕ್ಕೆ ಪ್ರತಿಯಾಗಿ ಆರಂಭವಾದ ಈ ಪ್ರತಿಭಟನೆಗಳು, ನಂತರ ಒಂದೇ ದಿನದಲ್ಲಿ ಭ್ರಷ್ಟಾಚಾರ-ವಿರೋಧಿ ಚಳವಳಿಯಾಗಿ ಬೆಳೆದು, ರಾಜಕೀಯ ವ್ಯವಸ್ಥೆಯ ಸಂಪೂರ್ಣ ಬದಲಾವಣೆಗೆ ಕಾರಣವಾಯಿತು.



















