ಬೆಂಗಳೂರು : ಆನ್‌ಲೈನ್ ಹಾಗೂ ಆಫ್ ಲೈನ್ ಬೆಟ್ಟಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಬ್ಯಾಂಕ್ ಲಾಕರ್ ನಲ್ಲಿ ದೊರೆತ ಚಿನ್ನದ ಬಿಸ್ಕತ್ ಗಳನ್ನು ಪರಿಶೀಲಿಸುತ್ತಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬೇಸ್ತು ಬಿದ್ದಿದ್ದಾರೆ. ಲಾಕರ್ ನಲ್ಲಿ ಇದ್ದದ್ದೆಲ್ಲವೂ ಚಿನ್ನ ಎಂದು ಲೆಕ್ಕ ಬರೆದುಕೊಂಡಿದ್ದ ತನಿಖಾಧಿಕಾರಿಗಳಿಗೆ, ಅವೆಲ್ಲವೂ ಚಿನ್ನ ಅಲ್ಲ ಎನ್ನುವುದು ತಿಳಿದು ಬಂದಿದೆ.
ತಮ್ಮ ಬಂಧನದಲ್ಲಿರುವ ವೀರೇಂದ್ರ ಅವರು ವಿಚಾರಣೆಯ ಸಂದರ್ಭದಲ್ಲಿ ನೀಡಿದ್ದ ಮಾಹಿತಿಯ ಆಧಾರದಲ್ಲಿ ಚಳ್ಳಕೆರೆಯಲ್ಲಿನ ಹಲವು ಬ್ಯಾಂಕ್ ಗಳಲ್ಲಿರುವ ಲಾಕರ್‌ಗಳನ್ನು ಇ.ಡಿ ಅಧಿಕಾರಿಗಳು ಇದೇ ಸೆ.6ರಂದು ಪರಿಶೀಲನೆ ಕಾರ್ಯ ನಡೆಸಿದ್ದರು. ಈ ಸಂದರ್ಭದಲ್ಲಿ ಲಾಕರ್ ಒಂದರಲ್ಲಿ 32.41 ಕೆ.ಜಿಯಷ್ಟು ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿದ್ದವು ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
‘ತನಿಖಾಧಿಕಾರಿಗಳು ಮೊದಲಿಗೆ ಅಷ್ಟನ್ನೂ ಚಿನ್ನ ಎಂದೇ ಪರಿಗಣಿಸಿದ್ದರು. ಎಲ್ಲಾ ಚಿನ್ನದ ಬಿಸ್ಕತ್‌ಗಳ ಬಣ್ಣ ಭಿನ್ನವಾಗಿ ಇದ್ದುದ್ದರಿಂದ, ಕೂಲಂಕಶವಾಗಿ ಪರಿಶೀಲಿಸಲಾಯಿತು. ಅವುಗಳಲ್ಲಿ 10.98 ಕೆ.ಜಿ ತೂಕದ 11 ಬಿಸ್ಕತ್ ಗಳು ಚಿನ್ನದ್ದಲ್ಲ ಎನ್ನುವುದು ತಿಳಿಯಿತು. ಆ ಹನ್ನೊಂದೂ ಬೆಳ್ಳಿಯ ಬಿಸ್ಕತ್‌ಗಳಿಗೆ 22 ಕ್ಯಾರಟ್ ನ ಚಿನ್ನದ ಲೇಪನ ಮಾಡಿರುವುದು ಪತ್ತೆಯಾಯಿತು’ ಎಂದು ಮೂಲಗಳು ಮಾಹಿತಿ ನೀಡಿವೆ.
ಬೆಳ್ಳಿಯ ಬಿಸ್ಕತ್ ಗಳಿಗೆ ಚಿನ್ನದ ಲೇಪನ ಯಾಕೆ ಮಾಡಲಾಗಿತ್ತು, ಅವುಗಳನ್ನು ಖರೀದಿಸಿದ್ದರೆ ಅಥವಾ ಇತರರು ಅವರಿಗೆ ನೀಡಿದ್ದರೆ ಎನ್ನುವುದರ ತನಿಖೆ ನಡೆಯುತ್ತಿದೆ. ಅವು ಬೆಟ್ಟಿಂಗ್‌ನಲ್ಲಿ ಹಣದ ಬದಲಿಗೆ ನೀಡಿರುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿವೆ.



















