ಬೆಂಗಳೂರು: ಇದುವರೆಗೂ ಗುಣಮಟ್ಟ, ಶುದ್ಧತೆ ಖಾತ್ರಿಗಾಗಿ ಚಿನ್ನದ ಆಭರಣಗಳಿಗೆ ಮಾತ್ರ ಹಾಲ್ ಮಾರ್ಕ್ ಇತ್ತು. ಆದರೆ, ಈಗ ಬೆಳ್ಳಿ ಆಭರಣಗಳಿಗೂ ಹಾಲ್ ಮಾರ್ಕ್ ಚಿಹ್ನೆ ಕಡ್ಡಾಯವಾಗಿದೆ. ಸೆಪ್ಟೆಂಬರ್ 1ರಿಂದಲೇ ಚಿನ್ನಕ್ಕೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಲಾಗಿದೆ. ಹಾಗಾಗಿ, ಗ್ರಾಹಕರು ಬೆಳ್ಳಿಯ ಆಭರಣ ಸೇರಿ ಯಾವುದೇ ವಸ್ತುಗಳನ್ನು ಖರೀದಿಸುವಾಗ ಹಾಲ್ ಮಾರ್ಕ್ ಅನ್ನು ಗಮನಿಸಿಯೇ ಖರೀದಿಸಬೇಕು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಹಾಲ್ ಮಾರ್ಕ್ ಪತ್ತೆ ಹೇಗೆ?
ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಸಂಸ್ಥೆಯು ಬೆಳ್ಳಿಗೆ ಹಾಲ್ ಮಾರ್ಕ್ ಗುರುತು ನೀಡಿದೆ. ಪ್ಯೂರಿಟಿಯ ಸಂಕೇತವೂ ಆದ 925 ಎನ್ನುವ ಸಂಖ್ಯೆಯು ಬೆಳ್ಳಿಯ ಆಭರಣದ ಮೇಲೆ ಇದ್ದರೆ ಅದು ಹಾಲ್ ಮಾರ್ಕ್ ಎಂಬುದು ದೃಢವಾಗುತ್ತದೆ. ಹಾಗೆಯೇ, ಬೆಳ್ಳಿಯ ಪರಿಶುದ್ಧತೆ ಆಧಾರದ ಮೇಲೆ ಬೆಳ್ಳಿಯ ಉತ್ಪನ್ನಗಳ ಮೇಲೆ 925, 999 ಹಾಗೂ 800 ಎಂಬ ಸಂಖ್ಯೆಗಳು ಕಾಣಿಸಿಕೊಂಡರೂ, ಅದು ಹಾಲ್ ಮಾರ್ಕ್ ಬೆಳ್ಳಿ ಎಂಬುದು ಖಾತ್ರಿಯಾಗುತ್ತದೆ.
ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಚಿಹ್ನೆಯು ಕೂಡ ಬೆಳ್ಳಿಯ ಗುಣಮಟ್ಟವನ್ನು ದೃಢಪಡಿಸುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ನ ತ್ರಿಕೋನಾಕಾರದ ಚಿಹ್ನೆ ಇದ್ದರೂ ಕೂಡ ಅಧು ಹಾಲ್ ಮಾರ್ಕ್ ಬೆಳ್ಳಿ ಎನಿಸುತ್ತದೆ. ಹಾಗೆಯೇ, ಮ್ಯಾಗ್ನಿಫೈಯಿಂಗ್ ಗ್ಲಾಸ್ ಮೂಲಕವೂ ಬೆಳ್ಳಿಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.
ದೇಶದಲ್ಲಿ ಚಿನ್ನದಂತೆ ಬೆಳ್ಳಿಯ ಬೆಲೆಯೂ ದಿನೇದಿನೆ ಗಗನಕ್ಕೇರುತ್ತಿದೆ. ಈಗ ಒಂದು ಕೆ.ಜಿ ಬೆಳ್ಳಿಯ ಬೆಲೆಯು 1.15-1.20 ಲಕ್ಷ ರೂಪಾಯಿವರೆಗೆ ಇದೆ. ಇದು ಮುಂದಿನ ದಿನಗಳಲ್ಲಿ 2 ಲಕ್ಷ ರೂಪಾಯಿ ದಾಟಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ, ಬೆಳ್ಳಿಗೆ ಹಾಲ್ ಮಾರ್ಕ್ ಕಡ್ಡಾಯಗೊಳಿಸುರುವುದು ಸ್ವಾಗತಾರ್ಹ ಎಂದು ಹೇಳಲಾಗುತ್ತಿದೆ.



















