ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿತ ಮತ್ತು ಹಠಾತ್ ಪ್ರವಾಹ ಸೃಷ್ಟಿಯಾಗಿ ಕನಿಷ್ಠ ಐವರು ಮೃತಪಟ್ಟಿದ್ದಾರೆ. 4 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 1,337 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಂಗ್ರಾ, ಮಂಡಿ, ಸಿರಮೌರ್ ಮತ್ತು ಕಿನ್ನರ್ ಜಿಲ್ಲೆಗಳಲ್ಲಿ ಬುಧವಾರ (ಇಂದು) ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸ್ಥಳೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಉನಾ ಮತ್ತು ಬಿಲಾಸ್ಪುರ ಜಿಲ್ಲೆಗಳಿಗೆ ಎಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಸೋಲನ್ ಜಿಲ್ಲೆಯ ಸ್ಯಾಮೋ ಗ್ರಾಮದಲ್ಲಿ, ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆ ಕುಸಿದು ಬಿದ್ದು, ಅವಶೇಷಗಳಡಿ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮೃತರನ್ನು ಹೇಮಲತಾ ಎಂದು ಗುರುತಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ, ಕುಲ್ಲುವಿನ ಧಲ್ಪುರದಲ್ಲಿ ಮನೆಯ ಅವಶೇಷಗಳಡಿಯಿಂದ ಸಿಲುಕಿದ್ದ ಪುರುಷ ಮತ್ತು ಮಹಿಳೆಯನ್ನು ರಕ್ಷಿಸಲಾಗಿತ್ತು. ಅಸ್ವಸ್ಥಗೊಂಡ ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಗುರುತು ಇನ್ನು ಪತ್ತೆಯಾಗಿಲ್ಲ.
ಮಂಡಿ ಜಿಲ್ಲೆಯ ಸುಂದರನಗರದ ಜಂಗಮ್ ಬಾಗ್ ಬಿಬಿಎಂಬಿ ಕಾಲೋನಿ ಬಳಿ ಮಂಗಳವಾರ ಸಂಜೆ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಮಹಿಳೆಯರು, ಒಂದು ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಭಾರತಿ (28) ಮತ್ತು ಅವರ ಎರಡೂವರೆ ವರ್ಷದ ಮಗು ಕೀರ್ತನ್ ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ.
ಇನ್ನೂ ಎರಡು-ಮೂರು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆಯಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮಂಡಿ ಜಿಲ್ಲಾಧಿಕಾರಿ ಅಪೂರ್ವ್ ದೇವಗನ್ ತಿಳಿಸಿದ್ದಾರೆ.
“ಶಾಲೆಗಳಿಗೆ ಇಂದು ರಜೆ”
ಭಾರಿ ಮಳೆ ಹಿನ್ನೆಲೆ ಶಿಮ್ಲಾ, ಕಾಂಗ್ರಾ ಮತ್ತು ಸಿರಮೌರ್ ಜಿಲ್ಲೆಗಳಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇಂದು (ಬುದವಾರ) ರಜೆ ಘೋಷಣೆ ಮಾಡಲಾಗಿದೆ.



















