ಬೆಂಗಳೂರು : ಜಯನಗರದ ಉದ್ಯಮಿ ಮನೋಜ್ ಎಂಬಾತನನ್ನು ರೌಡಿಶೀಟರ್ ರಾಜೇಶ್ ಅಲಿಯಾಸ್ ಅಪ್ಪಿ ಗ್ಯಾಂಗ್ ಕಿಡ್ನಾಪ್ ಮಾಡಿತ್ತು ಎಂದು ಸಿಸಿಬಿ ಪೊಲೀಸರಿಗೆ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆ ಪ್ರಕರಣವನ್ನು ಪೊಲೀಸರು ಕೈಗೆತ್ತಿಕೊಂಡಿದ್ದರು.
ಒಂದು ವರ್ಷದ ಹಿಂದೆ ಉದ್ಯಮಿ ಮನೋಜ್, ರೌಡಿಶೀಟರ್ ರಾಜೇಶ್ ಎಂಬಾತನ ಸಮ್ಮುಖದಲ್ಲಿ ನಿರ್ದೇಶಕ ನಂದ ಕಿಶೋರ್‌ಗೆ 1ಲಕ್ಷದ 20 ಸಾವಿರ ರೂ. ಸಾಲ ಕೊಟ್ಟಿದ್ದರು. ನಂತರ ಹಣ ವಾಪಾಸ್ ಕೊಡಲು ಕಿಶೋರ್ ಸತಾಯಿಸುತ್ತಿದ್ದರು. ಆಗ ಮನೋಜ್ ಗೆ ಹಣ ಕೊಡಿಸಿದ್ದ ರಾಜೇಶ್ ಬೆನ್ನು ಬಿದ್ದಿದ್ದರು. ಮನೋಜ್ ಕಾಟ ಜಾಸ್ತಿಯಾದ ಹಿನ್ನೆಲೆಯಲ್ಲಿ ಹಣ ಕೊಡೋದಾಗಿ ಬಸವೇಶ್ವರ ನಗರದ ಮೋದಿ ಆಸ್ಪತ್ರೆ ಬಳಿ ಕರೆಸಿಕೊಂಡು ಮನೋಜ್‌ನನ್ನು ಕಿಡ್ನಾಪ್ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ಕಾರಿನಲ್ಲಿ ರೌಡಿಶೀಟರ್‌ಗಳು ಮೂರು ಲಕ್ಷ ರೂ. ಹಣ ಹಾಕಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲದೇ, ಇನ್ನೂ ಹತ್ತು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಹಣ ಹೊಂದಿಸಿ ಕೊಡುವುದಾಗಿ ಸ್ನೇಹಿತರಿಗೆ ಕರೆ ಮಾಡಿದ್ದ ಮನೋಜ್ ಅವರ ಮೂಲಕ ಸಿಸಿಬಿಗೆ ದೂರು ಸಲ್ಲಿಸಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ರೌಡಿಶೀಟರ್ ಗಳನ್ನು ಬಂಧಿಸಿದ್ದಾರೆ.
ರೌಡಿಶೀಟರ್ ರಾಜೇಶ್ ಹಾಗೂ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂದಿಸಿದ್ದಾರೆ. ರಾಜೇಶ್, ಬೇಕರಿ ರಘು ಅಣ್ಣ ಸೀನಾ ಅಲಿಯಾಸ್ ಶ್ರೀನಿವಾಸ್, ನವೀನ ಬಂಧಿತ ಆರೋಪಿಗಳು. ಈ ಮುಂಚೆಯೇ ಉದ್ಯಮಿ ಮನೋಜ್ ಗೆ ರಾಜೇಶ್ ಅಲಿಯಾಸ್ ಅಪ್ಪಿ ಪರಿಚಯವಿದ್ದರು ಎನ್ನಲಾಗಿದ್ದು, ಮುಂದಿನ ಹಂತದಲ್ಲಿ ಸಿಸಿಬಿ ಪೊಲೀಸರು ನಿರ್ದೇಶಕ ನಂದಕಿಶೋರ್‌ನ ವಿಚಾರಣೆ ನಡೆಸಲಿದ್ದಾರೆ.



















