ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಜಪಾನ್ ಪ್ರವಾಸದ ಕೊನೆಯ ಭಾಗವಾಗಿ, ಶನಿವಾರ ಜಪಾನ್ ಪ್ರಧಾನಿ ಶಿರು ಇಶಿಬಾ ಅವರೊಂದಿಗೆ ಶಿಂಕನ್‌ಸೆನ್ ಬುಲೆಟ್ ರೈಲಿನಲ್ಲಿ ಟೋಕಿಯೋದಿಂದ ಸೆಂಡಾಯ್‌ಗೆ ಪ್ರಯಾಣ ಬೆಳೆಸಿದರು. ಒಟ್ಟು 370 ಕಿಲೋಮೀಟರ್ ದೂರದ ಪ್ರಯಣ ಇದಾಗಿತ್ತು.
ಸೆಂಡಾಯ್‌ಗೆ ತಲುಪಿದ ನಂತರ, ಪ್ರಧಾನಿ ಮೋದಿ ಅವರು ಜಪಾನೀಸ್ ರೈಲ್ವೆಯಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ಲೋಕೋ ಪೈಲಟ್‌ಗಳೊಂದಿಗೆ ಸಂವಾದ ನಡೆಸಿದರು. ಅವರು ನಗರಕ್ಕೆ ಕಾಲಿಡುತ್ತಿದ್ದಂತೆ, ಸ್ಥಳೀಯರು “ಮೋದಿ-ಸಾನ್, ಸ್ವಾಗತ!” ಎಂಬ ಘೋಷಣೆಗಳೊಂದಿಗೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಸ್ನೇಹದ ಸಂಕೇತವಾದ ಪ್ರಯಾಣ
ಜಪಾನ್ ಪ್ರಧಾನಿ ಇಶಿಬಾ ಅವರು ತಮ್ಮ ಎಕ್ಸ್ (ಟ್ವೀಟರ್) ಖಾತೆಯಲ್ಲಿ, “ಪ್ರಧಾನಿ ಮೋದಿ ಅವರೊಂದಿಗೆ ಸೆಂಡಾಯ್‌ಗೆ ಹೋಗುವ ದಾರಿಯಲ್ಲಿದ್ದೇನೆ” ಎಂದು ಬರೆದುಕೊಂಡು ರೈಲು ಪ್ರಯಾಣದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಪ್ರಯಾಣವನ್ನು ಉಭಯ ದೇಶಗಳ ನಡುವಿನ ಬಲವಾದ ಸಂಬಂಧದ ಸಂಕೇತ ಎಂದು ಬಣ್ಣಿಸಿದ್ದಾರೆ. “ಸ್ನೇಹ ಮತ್ತು ಪ್ರಗತಿಯ ಪ್ರಯಾಣ. ಭಾರತ-ಜಪಾನ್ ಸ್ನೇಹದ ಸೌಹಾರ್ದತೆಯನ್ನು ಸಂಕೇತಿಸುವ ಒಂದು ಅನನ್ಯ ನಡೆ ಇದಾಗಿದೆ” ಎಂದು ಅವರು ಹೇಳಿದ್ದಾರೆ.
ರಾಜ್ಯ-ಪ್ರಿಫೆಕ್ಚರ್ ಪಾಲುದಾರಿಕೆಗೆ ಒತ್ತು
ಇದಕ್ಕೂ ಮುನ್ನ ಟೋಕಿಯೋದಲ್ಲಿ, ಪ್ರಧಾನಿ ಮೋದಿ ಅವರು 16 ಜಪಾನೀಸ್ ಪ್ರಿಫೆಕ್ಚರ್‌ಗಳ (ಪ್ರಾಂತ್ಯಗಳ) ಗವರ್ನರ್‌ಗಳೊಂದಿಗೆ ಚರ್ಚೆ ನಡೆಸಿದರು. 15ನೇ ವಾರ್ಷಿಕ ಭಾರತ-ಜಪಾನ್ ಶೃಂಗಸಭೆಯಲ್ಲಿ ಪ್ರಾರಂಭಿಸಲಾದ ಉಪಕ್ರಮದ ಅಡಿಯಲ್ಲಿ ರಾಜ್ಯ-ಪ್ರಿಫೆಕ್ಚರ್ ಪಾಲುದಾರಿಕೆಗಳನ್ನು ಇನ್ನಷ್ಟು ಆಳಗೊಳಿಸಲು ಅವರು ಕರೆ ನೀಡಿದರು.
“ವ್ಯಾಪಾರ, ನಾವೀನ್ಯತೆ, ಉದ್ಯಮಶೀಲತೆ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಸಹಕರಿಸಲು ಅಪಾರ ಅವಕಾಶಗಳಿವೆ. ಸ್ಟಾರ್ಟ್‌ಅಪ್‌ಗಳು, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಂತಹ ಭವಿಷ್ಯದ ಕ್ಷೇತ್ರಗಳು ಸಹ ಪ್ರಯೋಜನಕಾರಿಯಾಗಬಹುದು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ತಂತ್ರಜ್ಞಾನ, ನಾವೀನ್ಯತೆ, ಹೂಡಿಕೆ, ಕೌಶಲ್ಯಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಎಸ್‌ಎಂಇಗಳಲ್ಲಿನ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಾರತ-ಜಪಾನ್ ಸಂಬಂಧಗಳು ಕೇವಲ ಟೋಕಿಯೋ ಮತ್ತು ನವದೆಹಲಿಗೆ ಸೀಮಿತವಾಗದೆ, ಇನ್ನಷ್ಟು ವಿಸ್ತರಿಸಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದರು.



















