ಪುಣೆ: 22 ರೋಲ್ಸ್ ರಾಯ್ಸ್ ಕಾರುಗಳು, ಬ್ರಿಟನ್ ರಾಣಿ ಎಲಿಜಬೆತ್ ಬಳಸಿದ್ದ ರೇಂಜ್ ರೋವರ್, 22 ಕೋಟಿ ರೂ. ಮೌಲ್ಯದ ಫ್ಯಾಂಟಮ್ VIII ಇಡಬ್ಲ್ಯುಬಿ…
ಇದು ಯಾವುದೋ ಶೋರೂಂನಲ್ಲಿರುವ ಕಾರುಗಳ ಮಾಹಿತಿಯಲ್ಲ, ಬದಲಿಗೆ ಭಾರತದ ಉದ್ಯಮಿ, ಜಾಗತಿಕ ಕಾರು ಸಂಗ್ರಹಕಾರ ಮತ್ತು ಪೂನಾವಾಲಾ ಸಮೂಹದ ಅಧ್ಯಕ್ಷರಾದ ಯೋಹಾನ್ ಪೂನಾವಾಲಾ ಅವರ ಬಳಿಯಿರುವ ಅದ್ಭುತ ಕಾರುಗಳ ಮಾಹಿತಿ. ಅವರ ಗ್ಯಾರೇಜ್‌ನಲ್ಲಿ ಬರೋಬ್ಬರಿ 22 ರೋಲ್ಸ್ ರಾಯ್ಸ್ ಕಾರುಗಳಿದ್ದು, ಇದರಲ್ಲಿ ಭಾರತದ ಅತ್ಯಂತ ದುಬಾರಿ ಎನಿಸಿದ, 22 ಕೋಟಿ ರೂ. ಮೌಲ್ಯದ ಫ್ಯಾಂಟಮ್ VIII ಇಡಬ್ಲ್ಯುಬಿ ಕೂಡ ಸೇರಿದೆ.

ಯೋಹಾನ್ ಅವರ ಕಾರು ಸಂಗ್ರಹದಲ್ಲಿ ಕೇವಲ ರೋಲ್ಸ್ ರಾಯ್ಸ್‌ಗಳು ಮಾತ್ರವಲ್ಲ, ಒಂದು ಕಾಲದಲ್ಲಿ ರಾಣಿ ಎಲಿಜಬೆತ್ ಅವರು ಬಳಸುತ್ತಿದ್ದ ವಿಶೇಷ ರೇಂಜ್ ರೋವರ್ ಕೂಡ ಇದೆ. ಇದರ ಜೊತೆಗೆ, ಸ್ಟೈಲಿಶ್ ಲ್ಯಾಂಬೊರ್ಗಿನಿಗಳು, ಆಕರ್ಷಕ ಫೆರಾರಿಗಳು ಮತ್ತು ಅತ್ಯಾಧುನಿಕ ಬೆಂಟ್ಲಿ ಕಾರುಗಳು ಸಹ ಅವರ ಸಂಗ್ರಹದಲ್ಲಿವೆ. ಅವರ ಪ್ರತಿಯೊಂದು ಕಾರುಗಳ ಮೇಲೆ ಅವರ ಹೆಸರಿನ ಮೊದಲಕ್ಷರಗಳಾದ ‘YZP’ ಎಂದು ಕೆತ್ತಲಾಗಿದೆ.
ಯಾರು ಈ ಯೋಹಾನ್ ಪೂನಾವಾಲಾ?
ಪುಣೆ ಮೂಲದ ಯೋಹಾನ್, ಪೂನಾವಾಲಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಜವರಾಯ್ ಪೂನಾವಾಲಾ ಅವರ ಪುತ್ರ. ಅವರು ಪೂನಾವಾಲಾ ಎಂಜಿನಿಯರಿಂಗ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಷೇರುದಾರರೂ ಹೌದು. ಅವರಿಗೆ ಕಾರುಗಳ ಮೇಲೆ ಅಪಾರ ಪ್ರೀತಿ ಇದ್ದು, 2023ರ ಜಿನೀವಾ ಅಂತರರಾಷ್ಟ್ರೀಯ ಮೋಟಾರ್ ಶೋನಲ್ಲಿ ‘ವರ್ಷದ ಸಂಗ್ರಾಹಕ’ ಎಂಬ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಅಷ್ಟೇ ಅಲ್ಲ, “ವಿಶ್ವದ ಟಾಪ್ 100 ಕ್ಲಾಸಿಕ್ ಕಾರು ಸಂಗ್ರಹಕಾರರ” ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

90ರ ದಶಕದಲ್ಲಿ ಉಡುಗೊರೆಯಾಗಿ ಬಂದ ‘ಚೆವಿ’ ಕಾರಿನಿಂದ ತಮ್ಮ ಸಂಗ್ರಹವನ್ನು ಪ್ರಾರಂಭಿಸಿದ 53 ವರ್ಷದ ಯೋಹಾನ್, ತಮ್ಮ ಪತ್ನಿ ಮಿಚೆಲ್ ಪೂನಾವಾಲಾ ಅವರೊಂದಿಗೆ ಮದುವೆಯಾದ ನಂತರ ‘ಮಹಾರಾಜ ಪಂಚಕೋಟ್ ಫ್ಯಾಂಟಮ್ 3’ ಎಂಬ ಮೊದಲ ಕಾರನ್ನು ಖರೀದಿಸಿದರು. ಕಾರುಗಳಲ್ಲದೆ, ಯೋಹಾನ್ ಬಳಿ ಖಾಸಗಿ ಜೆಟ್, ಐಷಾರಾಮಿ ಹೆಲಿಕಾಪ್ಟರ್ ಮತ್ತು ಮುಂಬೈನಲ್ಲಿ 8,500 ಕೋಟಿ ರೂ. ಮೌಲ್ಯದ ಬಂಗಲೆಯೂ ಇದೆ. ಈ ಬಂಗಲೆಯನ್ನು ಪ್ರಸ್ತುತ ಕಾರು ಮತ್ತು ಕಲಾ ಸಂಗ್ರಹಾಲಯವಾಗಿ ಪರಿವರ್ತಿಸಲಾಗುತ್ತಿದೆ.



















