ನವದೆಹಲಿ: ಅಮೆರಿಕದೊಂದಿಗೆ ಮುನಿಸಿಕೊಂಡು ಚೀನಾದೊಂದಿಗೆ ಕೈಜೋಡಿಸಲು ಭಾರತ ಮುಂದಾದ ಬೆನ್ನಲ್ಲೇ ಭಾರತದಲ್ಲಿ ಚೀನಾದ ಜನಪ್ರಿಯ ಶಾರ್ಟ್ ವಿಡಿಯೋ ಅಪ್ಲಿಕೇಶನ್ ಟಿಕ್ ಟಾಕ್ ಮತ್ತೆ ಮರಳಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದರೆ, ಈ ವರದಿಗಳನ್ನು ಕೇಂದ್ರ ಸರ್ಕಾರವು ಸ್ಪಷ್ಟವಾಗಿ ತಳ್ಳಿಹಾಕಿದೆ. 5 ವರ್ಷಗಳ ಹಿಂದೆ ನಿಷೇಧಕ್ಕೊಳಗಾಗಿದ್ದ ಟಿಕ್ ಟಾಕ್, ಆನ್ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಾದ ಶೀನ್ (Shein) ಮತ್ತು ಅಲಿ ಎಕ್ಸ್‌ಪ್ರೆಸ್ (AliExpress) ವೆಬ್‌ಸೈಟ್‌ಗಳು ಕೆಲವು ಬಳಕೆದಾರರಿಗೆ ಭಾರತದಲ್ಲಿ ಗೋಚರಿಸಿದ ನಂತರ ಈ ವದಂತಿಗಳು ಹಬ್ಬಿದ್ದವು.
ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಟಿಕ್ ಟಾಕ್ ವೆಬ್ ಸೈಟ್ ಮುಖಪುಟವನ್ನು ತಾವು ನೋಡಿದ್ದಾಗಿ ಹೇಳಿಕೊಂಡಿದ್ದರು. ಆದರೆ, ವೆಬ್ ಲಾಗಿನ್ ಮಾಡಲು, ವಿಡಿಯೋಗಳನ್ನು ವೀಕ್ಷಿಸಲು ಅಥವಾ ಯಾವುದೇ ರೀತಿಯಲ್ಲಿ ಶಾಪಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದೂ ಹೇಳಿಕೊಂಡಿದ್ದರು. ಅಲ್ಲದೆ, ಈ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ಗಳಲ್ಲಿ ಲಭ್ಯವಿರಲಿಲ್ಲ.
ಈ ಬೆಳವಣಿಗೆಯ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, “ಟಿಕ್ ಟಾಕ್ ಮೇಲಿನ ನಿಷೇಧವನ್ನು ಹಿಂಪಡೆಯುವ ಯಾವುದೇ ಆದೇಶವನ್ನು ಭಾರತ ಸರ್ಕಾರ ನೀಡಿಲ್ಲ. ಈ ಕುರಿತಾದ ಯಾವುದೇ ಸುದ್ದಿ ಅಥವಾ ಹೇಳಿಕೆಯು ಸುಳ್ಳು ಮತ್ತು ದಾರಿತಪ್ಪಿಸುವಂತಿದೆ” ಎಂದಿದೆ. ಇದೊಂದು ನೆಟ್ವರ್ಕ್ ಮಟ್ಟದ ತಾಂತ್ರಿಕ ದೋಷದಿಂದಾಗಿರಬಹುದು ಎಂದು ಅಂದಾಜಿಸಲಾಗಿದೆ.
ನಿಷೇಧದ ಹಿನ್ನೆಲೆ
2020ರ ಜೂನ್ 29ರಂದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಡೇಟಾ ಸುರಕ್ಷತೆಯ ಕಾರಣಗಳನ್ನು ನೀಡಿ ಟಿಕ್ ಟಾಕ್ ಸೇರಿದಂತೆ 59 ಚೀನೀ ಆ್ಯಪ್‌ಗಳನ್ನು ದಿಢೀರ್ ನಿಷೇಧಿಸಿತ್ತು. ಈ ಅಪ್ಲಿಕೇಶನ್‌ಗಳು ಭಾರತದ ಸಾರ್ವಭೌಮತೆ, ಸಮಗ್ರತೆ, ರಕ್ಷಣೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿವೆ ಎಂದು ಸರ್ಕಾರ ಆರೋಪಿಸಿತ್ತು. ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಮಾರಣಾಂತಿಕ ಸಂಘರ್ಷದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
ಈ ವರ್ಷದ ಫೆಬ್ರವರಿಯಲ್ಲಿ, ನಿಷೇಧಿತ ಚೀನೀ ಅಪ್ಲಿಕೇಶನ್‌ಗಳ ಪೈಕಿ ಕೆಲವು ಬದಲಾವಣೆಗಳೊಂದಿಗೆ ಅಥವಾ ತದ್ರೂಪಿ ಆವೃತ್ತಿಗಳ ರೂಪದಲ್ಲಿ ಭಾರತದ ಆಪ್ ಸ್ಟೋರ್‌ಗಳಿಗೆ ಮರಳಿದ್ದವು. ಆದರೆ, ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದ ಟಿಕ್ ಟಾಕ್ ಮಾತ್ರ ಈ ಪಟ್ಟಿಯಲ್ಲಿ ಇರಲಿಲ್ಲ.



















