ನವದೆಹಲಿ: ಬೀದಿ ನಾಯಿಗಳ ಕುರಿತು ಆಗಸ್ಟ್ 8 ರಂದು ತಾನು ನೀಡಿದ್ದ ವಿವಾದಾತ್ಮಕ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮಾರ್ಪಡಿಸಿದೆ. ಹಿಡಿದ ಬೀದಿ ನಾಯಿಗಳಿಗೆ ಲಸಿಕೆ ಮತ್ತು ಚಿಕಿತ್ಸೆ ನೀಡಿದ ನಂತರ ಅವುಗಳನ್ನು ಅದೇ ಪ್ರದೇಶಕ್ಕೆ ವಾಪಸ್ ಬಿಡಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಇಂದು ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಈ ತೀರ್ಪು ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಆದಾಗ್ಯೂ, ರೇಬೀಸ್ ಸೋಂಕಿತ ಅಥವಾ ಆಕ್ರಮಣಕಾರಿ ನಡವಳಿಕೆ ತೋರುವ ನಾಯಿಗಳನ್ನು ಪ್ರತ್ಯೇಕ ಆಶ್ರಯತಾಣಗಳಲ್ಲಿ ಇಡಬೇಕು ಎಂದೂ ನ್ಯಾಯಪೀಠ ಸೂಚಿಸಿದೆ.

“ಬೀದಿ ನಾಯಿಗಳನ್ನು ವಾಪಸ್ ಬಿಡುವುದರ ಮೇಲಿದ್ದ ನಿಷೇಧವನ್ನು ತಡೆಹಿಡಿಯಲಾಗಿದೆ. ಅವುಗಳಿಗೆ ಚಿಕಿತ್ಸೆ ನೀಡಿ, ಲಸಿಕೆ ಹಾಕಿ, ಹಿಡಿದ ಸ್ಥಳಕ್ಕೇ ವಾಪಸ್ ಕಳುಹಿಸಬೇಕು,” ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಹೇಳಿದೆ. ಅಲ್ಲದೆ, ಈ ಪ್ರಕರಣದ ವ್ಯಾಪ್ತಿಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗಿದ್ದು, ವಿವರವಾದ ವಿಚಾರಣೆಯ ನಂತರ ರಾಷ್ಟ್ರೀಯ ನೀತಿಯನ್ನು ರೂಪಿಸುವುದಾಗಿ ನ್ಯಾಯಾಲಯ ತಿಳಿಸಿದೆ.
ಹಿಂದಿನ ಆದೇಶ ಮತ್ತು ಆಕ್ರೋಶ
ಆಗಸ್ಟ್ 8 ರಂದು ನ್ಯಾಯಮೂರ್ತಿ ಪರ್ದಿವಾಲಾ ನೇತೃತ್ವದ ಪೀಠವು, ದೆಹಲಿ-ಎನ್‌ಸಿಆರ್ ಪಾಲಿಕೆ ಅಧಿಕಾರಿಗಳಿಗೆ ಎಂಟು ವಾರಗಳೊಳಗೆ ಎಲ್ಲಾ ಬೀದಿ ನಾಯಿಗಳನ್ನು ಹಿಡಿದು, ಮೀಸಲಾದ ಆಶ್ರಯತಾಣಗಳಲ್ಲಿ ಇರಿಸುವಂತೆ ಆದೇಶಿಸಿತ್ತು. ಈ ಆದೇಶವು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ದೆಹಲಿ ಸೇರಿದಂತೆ ದೇಶದ ಹಲವೆಡೆ ಶ್ವಾನಪ್ರಿಯರು, ಪ್ರಾಣಿಪ್ರಿಯರು ಭಾರೀ ಪ್ರತಿಭಟನೆಯನ್ನೂ ನಡೆಸಿದ್ದರು. ಸಾರ್ವಜನಿಕರ ವಿರೋಧದ ನಂತರ, ಮುಖ್ಯ ನ್ಯಾಯಮೂರ್ತಿಗಳು ಈ ಪ್ರಕರಣವನ್ನು ಹೊಸ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದ್ದರು.
ಹೊಸ ಆದೇಶದ ಪ್ರಮುಖ ನಿರ್ದೇಶನಗಳು:
ಸಾರ್ವಜನಿಕ ಆಹಾರ ನಿಷೇಧ: ಬೀದಿ ನಾಯಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ಮೀಸಲು ಆಹಾರ ವಲಯ: ಬೀದಿ ನಾಯಿಗಳಿಗೆ ಆಹಾರ ನೀಡಲು ಮೀಸಲಾದ ಸ್ಥಳಗಳನ್ನು (Dedicated feeding spaces) ರಚಿಸುವಂತೆ ಪಾಲಿಕೆಗಳಿಗೆ ಸೂಚಿಸಲಾಗಿದೆ.
ದತ್ತು ಸ್ವೀಕಾರ: ಪ್ರಾಣಿ ಪ್ರಿಯರು ನಾಯಿಗಳನ್ನು ದತ್ತು ತೆಗೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. ಆದರೆ, ದತ್ತು ಪಡೆದ ನಾಯಿಗಳನ್ನು ಮತ್ತೆ ಬೀದಿಗೆ ಬಿಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಅವರ ಮೇಲಿರುತ್ತದೆ.
ಠೇವಣಿ ಮೊತ್ತ: ಪ್ರಕರಣದಲ್ಲಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ವೈಯಕ್ತಿಕ ಅರ್ಜಿದಾರರು 25,000 ರೂ. ಮತ್ತು ಎನ್‌ಜಿಒಗಳು 2 ಲಕ್ಷ ರೂ. ಠೇವಣಿ ಇಡಬೇಕೆಂದು ನ್ಯಾಯಾಲಯ ಆದೇಶಿಸಿದೆ.