ಬೆಂಗಳೂರು: ದೇಶದಲ್ಲಿ ಐಟಿ, ಕೈಗಾರಿಕೆ ಸೇರಿ ಹಲವು ಕ್ಷೇತ್ರಗಳು ಬೆಳವಣಿಗೆ ಹೊಂದುತ್ತಿವೆ. ಇದೇ ಕಾರಣಕ್ಕಾಗಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್ಒ) ಜೂನ್ ನಲ್ಲಿ21.89 ಲಕ್ಷ ಜನ ದಾಖಲೆಯ ನೋಂದಣಿ ಮಾಡಿಕೊಂಡಿದ್ದಾರೆ. ಒಂದು ತಿಂಗಳಲ್ಲಿಉದ್ಯೋಗಿಗಳ ನೋಂದಣಿಯಲ್ಲಿಇಪಿಎಫ್ಒ ಈಗ ಸಾರ್ವಕಾಲಿಕ ದಾಖಲೆ ಬರೆದಿದೆ.
ಇಪಿಎಫ್ಒಗೆ ಹೊಸದಾಗಿ ನೋಂದಣಿ ಮಾಡಿಕೊಂಡ ಒಟ್ಟು ಉದ್ಯೋಗಿಗಳಲ್ಲಿ18-25 ವರ್ಷದೊಳಗಿನವರೇ 6.39 ಲಕ್ಷ ಇದ್ದಾರೆ. ಇನ್ನು, 3 ಲಕ್ಷ ಮಹಿಳಾ ಉದ್ಯೋಗಿಗಳು ಕೂಡ ಒಂದೇ ತಿಂಗಳಲ್ಲಿಇಪಿಎಫ್ಒಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮಾಹಿತಿ ನೀಡಿದೆ.
ಇಪಿಎಫ್ಒ ಸಂಸ್ಥೆಗೆ ಉದ್ಯೋಗಿಗಳ ನೋಂದಣಿ ಸಂಖ್ಯೆ ಜಾಸ್ತಿಯಾದರೆ, ಉದ್ಯೋಗ ಪಡೆಯುವವರ ಸಂಖ್ಯೆ ಜಾಸ್ತಿಯಾದಂತೆ ಆಗುತ್ತದೆ. ಒಂದೇ ತಿಂಗಳಲ್ಲಿ21.89 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿರುವುದು ಕೂಡ ಇಷ್ಟು ಉದ್ಯೋಗ ಸೃಷ್ಟಿಯಾದಂತಾಗಿದೆ. ಇದೇ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ನೋಂದಣಿ ಮಾಡಿಕೊಳ್ಳುವವರ ಪ್ರಮಾಣ ಶೇ.12.68ರಷ್ಟು ಜಾಸ್ತಿಯಾಗಿದೆ. ಕಳೆದ ವರ್ಷದ ಜೂನ್ಗೆ ಹೋಲಿಸಿದರೆ ಶೇ.3.61ರಷ್ಟು ಜಾಸ್ತಿಯಾದಂತಾಗಿದೆ.
ಇಪಿಎಫ್ಒ ಖಾಸಗಿ ಸಂಸ್ಥೆಗಳಿಗೆ ಉಳಿತಾಯ, ರಿಟರ್ನ್ಸ್ ಹಾಗೂ ಪಿಂಚಣಿ ಖಾತ್ರಿ ನೀಡುವ ಬಹುದೊಡ್ಡ ಸಂಸ್ಥೆಯಾಗಿದೆ. ಸದ್ಯ ಇಪಿಎಫ್ಒದಲ್ಲಿ 7 ಕೋಟಿಗೂ ಅಧಿಕ ಸದಸ್ಯರಿದ್ದಾರೆ. ಶೀಘ್ರದಲ್ಲೇ ಎಟಿಎಂ ಮೂಲಕ ಪಿಎಫ್ ಹಣ ವಿತ್ ಡ್ರಾ ಮಾಡುವ ವ್ಯವಸ್ಥೆಯನ್ನೂ ಇಪಿಎಫ್ಒ ಜಾರಿಗೆ ತರುತ್ತಿದೆ.



















