ನವದೆಹಲಿ: ಕನಿಷ್ಠ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬಲ್ಲ ಅಪರಾಧಗಳಿಗೆ ಸಂಬಂಧಿಸಿದಂತೆ ಸತತ 30 ದಿನಗಳು ಬಂಧನಕ್ಕೊಳಗಾಗುವ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಅಧಿಕಾರದಿಂದ ವಜಾಗೊಳಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಜಂಟಿ ಸಮಿತಿಗೆ ಕಳುಹಿಸುವ ಪ್ರಸ್ತಾಪವನ್ನು ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಇಂದು(ಬುಧವಾರ) ಮುಂದಿಟ್ಟರು. ಸದನ ಪ್ರಸ್ತಾವನೆಯನ್ನು ಅಂಗೀಕರಿಸಿದೆ. ಆದರೇ, ತೀವ್ರ ಗದ್ದಲದ ನಡುವೆ ಕಲಾಪವನ್ನು ಸಂಜೆ 5 ಗಂಟೆಗೆ ಸ್ಪೀಕರ್ ಮುಂದೂಡಿದರು.
ಅಮಿತ್ ಶಾ ಸಂವಿಧಾನ (130ನೇ ತಿದ್ದುಪಡಿ) ಮಸೂದೆ, ಕೇಂದ್ರಾಡಳಿತ ಪ್ರದೇಶಗಳ ಸರಕಾರ (ತಿದ್ದುಪಡಿ) ಮಸೂದೆ, ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಗಡಣೆ (ತಿದ್ದುಪಡಿ) ಮಸೂದೆಗಳನ್ನು ಜಂಟಿ ಸಮಿತಿಗೆ ಕಳುಹಿಸುವ ಪ್ರಸ್ತಾಪ ಮುಂದಿಟ್ಟರು.
ಈ ಶಾಸನ “ಕಠಿಣ” ಎಂದು ಕರೆದು, ಸರ್ಕಾರವು ವಿಪಕ್ಷಗಳು ಆಳುವ ರಾಜ್ಯಗಳನ್ನು ಅಸ್ಥಿರಗೊಳಿಸಲು ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಅನಿಯಂತ್ರಿತವಾಗಿ ಬಂಧಿಸುವ ಮೂಲಕ ಇದನ್ನು ಬಳಸಿಕೊಳ್ಳುತ್ತದೆ ಎಂದು ವಿಪಕ್ಷಗಳ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸೂದೆಗಳನ್ನು ಜಂಟಿ ಸಮಿತಿಯ ಪರಿಶೀಲನೆಗೆ ಕಳುಹಿಸಬೇಕೆಂದು ಪ್ರಸ್ತಾಪಿಸುತ್ತಿದ್ದಂತೆ, ತೃಣಮೂಲ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ಇತರ ವಿಪಕ್ಷಗಳ ಸಂಸದರು ಮಸೂದೆಗಳ ಪ್ರತಿಗಳನ್ನು ಹರಿದು ಗೃಹ ಸಚಿವ ಶಾ ಅವರತ್ತ ಎಸೆದ ಪ್ರಸಂಗವೂ ನಡೆಯಿತು.
ಗಂಭೀರ ಅಪರಾಧದ ಆರೋಪ ಹೊತ್ತಿರುವ ಹಾಲಿ ಸಚಿವರನ್ನು ವಜಾಗೊಳಿಸುವುದಕ್ಕೆ ಪ್ರಸ್ತುತ ಯಾವುದೇ ಕಾನೂನಾತ್ಮಕ ಮಾರ್ಗವಿಲ್ಲ. ಸಂವಿಧಾನ(130 ನೇ ತಿದ್ದುಪಡಿ) ಮಸೂದೆಯ ಅಡಿ ಬಂಧನಕ್ಕೊಳಗಾಗಿ ಬಿಡುಗಡೆಯ ಬಳಿಕ ಅವರು ಮತ್ತೆ ತಮ್ಮ ಮೊದಲಿದ್ದ ಹುದ್ದೆ ಪಡೆಯಬಹುದಾಗಿದೆ. ಈ ಮಸೂದೆ ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವರಿಗೂ ಅನ್ವಯಿಸಲಿದೆ.
“ಈ ಮಸೂದೆ ಸಂವಿಧಾನದ ಮೂಲ ತತ್ವವನ್ನು ಉಲ್ಲಂಘಿಸುತ್ತದೆ. ಅಮಿತ್ ಶಾ ಗುಜರಾತ್ ಗೃಹ ಸಚಿವರಾಗಿದ್ದಾಗ ಅವರನ್ನು ಬಂಧಿಸಲಾಗಿತ್ತು. ಆಗ ಅವರು ನೈತಿಕತೆಯನ್ನು ಎತ್ತಿಹಿಡಿದಿದ್ದಾರೆಯೇ?” ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್ ಪ್ರಶ್ನಿಸಿದ್ದಾರೆ.
ವೇಣುಗೋಪಾಲ್ ಪ್ರಶ್ನೆಗೆ ಆಕ್ರೋಶಗೊಂಡ ಅಮಿತ್ ಶಾ, ಬಂಧನಕ್ಕೊಳಗಾಗುವ ಮೊದಲೇ ಸಚಿವ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೆ. ನನ್ನ ವಿರುದ್ಧ ಸುಳ್ಳು ಆರೋಪಗಳಿದ್ದವು. ನಾನು ವಿಚಾರಣೆಗೆ ಒಳಗಾಗುವವರೆಗೂ ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಿದ್ದೆ. ನ್ಯಾಯಾಲಯ ಎಲ್ಲಾ ಆರೋಪಗಳಿಂದ ನನ್ನನ್ನು ಮುಕ್ತಗೊಳಿಸುವವರೆಗೂ ನಾನು ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿರಲಿಲ್ಲ” ಎಂದು ಹೇಳಿದ್ದಾರೆ.
2014 ರಲ್ಲಿ, ಸಿಬಿಐ ವಿಶೇಷ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆ ಉಲ್ಲೇಖಿಸಿ ಶಾ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತ್ತು.
ಗಂಭೀರ ಪ್ರಕರಣಗಳನ್ನು ಎದುರಿ ಸುತ್ತಿರುವವನ್ನು ಹುದ್ದೆಯಿಂದ ದೂರುವಿಡುವ ಉದ್ದೇಶ, ಸಂವಿಧಾನದ ನೈತಿಕತೆ ಮತ್ತು ಒಳ್ಳೆಯ ಆಡಳಿತದ ತತ್ವಗಳ ಪಾಲನೆಗಾಗಿ ಉನ್ನತ ಹುದ್ದೆಯಲ್ಲಿರುವವರು ಯಾವುದೇ ಅನುಮಾನಕ್ಕೆ ಕಾರಣ ಇಲ್ಲದಂತೆ ನಡೆದುಕೊಳ್ಳಲು,ಕೆಲವರು ಜೈಲಲ್ಲಿದ್ದರೂ ಅಧಿಕಾರದಲ್ಲಿ ಮುಂದುವರಿಯುತ್ತಿರುವ ಪ್ರವೃತ್ತಿ ಹಿನ್ನೆಲೆಯಲ್ಲಿ ಈ ಮಸೂದೆ ಮಂಡನೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಮತ್ತು ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ ಜೈಲಿನಲ್ಲಿದ್ದರೂ ತಮ್ಮ ಹುದ್ದೆಯಲ್ಲಿ ಮುಂದುವರೆದಿದ್ದುದು ಈಗ ಮುನ್ನೆಲೆಗೆ ಬಂದಿದೆ.