ಗ್ಯಾರಂಟಿ…ಗ್ಯಾರಂಟಿ…ಗ್ಯಾರಂಟಿ..ಹೌದು! ಕರ್ನಾಟಕದಲ್ಲಿ ಮೋಡಿ ಮಾಡಿದ ಈ ಪದ…ದೇಶದೆಲ್ಲೆಡೆ ವ್ಯಾಪಿಸಿ ಬಿಟ್ಟಿದೆ. ಈಗ ಪ್ರತಿಯೊಬ್ಬ ಜನಾನುರಾಗಿಯೂ ಈ ಪದ ಜಪಿಸುವಂತಾಗಿದೆ. ಈ ಗ್ಯಾರಂಟಿ ಈಗ ಹಲವರಿಗೆ ಖುಷಿ ನೀಡುತ್ತಿದ್ದರೆ, ಹಲವರಿಗೆ ಕಸಿವಿಸಿ ಉಂಟು ಮಾಡುತ್ತಿರುವುದಂತೂ ಗ್ಯಾರಂಟಿ. ಈ ಗ್ಯಾರಂಟಿಯಿಂದಾಗಿ ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರೇ ಆಡಳಿತಕ್ಕೆ ಅನುದಾನ ಸಿಗುತ್ತಿಲ್ಲ ಎಂದು ಕಣ್ಣೀರು ಸುರಿಸುತ್ತಿದ್ದಾರೆ. ವಿರೋಧ ಪಕ್ಷಗಳಂತೂ ಹಿಡಿಹಿಡಿಶಾಪ ಹಾಕುತ್ತಲೇ ಇವೆ. ಈಗ ನಾವು ಹೇಳ್ತೀರುವ ವಿಷಯ ಗಮನಿಸಿದರೆ ಇದು ಸತ್ಯವಾ? ಎಂಬ ಸಂಶಯ ಎಲ್ಲರನ್ನೂ ಕಾಡುವಂತಿದೆ…

ರಾಜ್ಯ ಸರ್ಕಾರದ 43 ಇಲಾಖೆಗಳಲ್ಲಿ ಬರೋಬ್ಬರಿ 2,76,386 ಹುದ್ದೆಗಳು ಖಾಲಿ ಇವೆ. ಇಷ್ಟೊಂದು ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ಸರ್ಕಾರವು ಇಲಾಖೆಗಳನ್ನು ಹೇಗೆ ನಡೆಸುತ್ತಿದೆ? ಯಾವ ರೀತಿ ಜನರಿಗೆ ಸೇವೆ ಒದಗಿಸುತ್ತಿದೆ ಎಂಬುವುದೇ ಈಗ ಯಕ್ಷ ಪ್ರಶ್ನೆಯಾಗಿದೆ. ಗ್ಯಾರಂಟಿ ಎನ್ನುತ್ತಿರುವ ಸರ್ಕಾರದ ಅಸಲಿ ಕಹಾನಿ ಇದೆನಾ? ಗ್ಯಾರಂಟಿಯಿಂದಾಗಿ ಸರ್ಕಾರವು ಆಡಳಿತದ ವಿಷಯದಲ್ಲಿ ಇಷ್ಟೊಂದು ನಿರ್ಲಕ್ಷ್ಯ ವಹಿಸುತ್ತಿದೆಯೇ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.
ಇಷ್ಟೊಂದು ಖಾಲಿ ಇರುವ ಹುದ್ದೆಗಳಲ್ಲಿ 16,017 ಎ ದರ್ಜೆಯ ಹುದ್ದೆಗಳಿವೆ. ಬಿ ದರ್ಜೆಯ 16,734, ಸಿ ದರ್ಜೆಯ 1,66,021, ಡಿ ದರ್ಜೆಯ 77,614 ಹುದ್ದೆಗಳು ಖಾಲಿ ಇವೆ. ಆದರೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯೊಂದರಲ್ಲೇ 70,727 ಹುದ್ದೆಗಳು ಖಾಲಿ ಇವೆ.

ಸರ್ಕಾರಿ ಶಾಲೆಗಳು ಮುಚ್ತಿವೆ..ಮುಚ್ತಿವೆ..ಅಂತಾ ಹೇಳ್ತಿದ್ರಲ್ಲ ಇದರ ಹಿಂದಿನ ಅಸಲಿ ಕಾರಣ ಇದೆ ನೋಡಿ..ರಾಜ್ಯಾದ್ಯಂತ ಬರೋಬ್ಬರಿ 70 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆ ಖಾಲಿ ಇದೆ ಅಂದ್ರೆ ಮಕ್ಕಳ ಭವಿಷ್ಯ ಏನಾಗಬೇಕು? ಶಿಕ್ಷಣದ ಗುಣಮಟ್ಟ ಏನಾಗಬೇಕು? ಹೀಗಾದರೆ ಬಡ ಮಕ್ಕಳು ವಿದ್ಯಾವಂತರಾಗಲು? ಸುಕ್ಷಿತರಾಗಲು ಸಾಧ್ಯವೇ? ಯಾಕೆ ಸರ್ಕಾರಕ್ಕೆ ಬಡ ಮಕ್ಕಳ ಬಗ್ಗೆ ಇಷ್ಟೊಂದು ತಾತ್ಸರ..ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗಿ ದುಡ್ಡು ಸುರಿದು ವಿದ್ಯೆ ಪಡಿತಾರೆ. ಆದರೆ, ಬಡವರ ಮಕ್ಕಳು ಏನು ಮಾಡಬೇಕು? ನಿಮಗೆ ಗೊತ್ತಿರಲಿ, ರಾಜ್ಯದಲ್ಲಿ ಲಕ್ಷದಷ್ಟು ಏಕೋಪಾಧ್ಯಾಯ ಶಾಲೆಗಳಿವೆ. ಅಂದ್ರೆ, ಒಂದರಿಂದ 5 ಅಥವಾ 6ನೇ ತರಗತಿಯವರೆಗೆ ಒಬ್ಬನೇ ಒಬ್ಬ ಶಿಕ್ಷಕ. ಇದರಿಂದಾಗಿ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯವಾ? ಬಾಯಿ ಎತ್ತಿದರೆ ಬಡವರ ಕಲ್ಯಾಣ, ಬಡವರ ಉದ್ಧಾರ ಎಂದು ಹೇಳುವ ಸರ್ಕಾರದ ಬಡವರ ಮಕ್ಕಳ ವಿದ್ಯೆಯ ಜೊತೆಗೆ ಭವಿಷ್ಯದ ಜೊತೆಗೆ ಆಟವಾಡುತ್ತಿರುವುದು ಏಕೆ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

ಇದನ್ನು ನಾವು ಹೇಳುತ್ತಿಲ್ಲ. ಸರ್ಕಾರವೇ ಕೊಟ್ಟ ದಾಖಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಶಿಕ್ಷಕರ ಕೊರತೆಯಿದೆ. ಕಳೆದ ಎರಡ್ಮೂರು ವರ್ಷಗಳಿಂದಲೂ ಸರ್ಕಾರದಿಂದ ಯಾವುದೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಬಹುಪಾಲು ಶಿಕ್ಷಕರ ಕೊರತೆಯೇ ಇದೆ. ಇದೇ ಸರ್ಕಾರಿ ಶಾಲೆಗಳು ಮುಚ್ಚಲು ನೇರ ಕಾರಣ ಎಂದು ಪ್ರಜ್ಞಾವಂತರ ಕಿಡಿಕಾರುತ್ತಿದ್ದಾರೆ. ಇದು ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚುವ ಹುನ್ನಾರವೇ? ಹಂತ ಹಂತವಾಗಿ ಹುದ್ದೆಗಳನ್ನು ನಿರ್ಲಕ್ಷಿಸಿ ಒಂದೊಂದಾಗಿ ಸರ್ಕಾರಿ ಶಾಲೆ ಮುಚ್ಚಬೇಕೆನ್ನುವುದು ಸರ್ಕಾರದ ಉದ್ಧೇಶವಾಗಿರಬಹುದು ಎಂದು ಬಡವರ ಮಕ್ಕಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ ಎಂದ ಮೇಲೆ ಗುಣಮಟ್ಟದ ಶಾಲಾ ಪರಿಕರಗಳನ್ನು, ಕಟ್ಟಡಗಳನ್ನು ನೀಡಿದರೆ ಏನು ಪ್ರಯೋಜನ…ನೂರಾರು ವಿದ್ಯಾರ್ಥಿಗಳಿಗೆ ಒಬ್ಬನೇ ಒಬ್ಬ ಶಿಕ್ಷಕ ಅಂದ್ರೆ ಶಿಕ್ಷಣದ ಗುಣಮಟ್ಟವನ್ನು ದೇವರೇ ಬಲ್ಲ..

ರಾಜ್ಯದಲ್ಲಿ ಒಂದಿಲ್ಲೊಂದು ರೋಗ ಉಲ್ಭಣವಾಗುತ್ತಲೇ ಇವೆ. ಕೊರೊನಾ ಬಂದು ಹೋದ ನಂತರ ಒಂದಿಲ್ಲೊಂದು ಕಾಯಿಲೆ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಇಷ್ಟಿದ್ದರೂ ಆರೋಗ್ಯ ಇಲಾಖೆಯಲ್ಲಿ ಮಾತ್ರ ಸಿಬ್ಬಂದಿಗಳು ಇಲ್ಲ. ಇದರ ಲಾಭ ಮಾಡಿಕೊಳ್ಳುತ್ತಿರುವ ಖಾಸಗಿ ಆಸ್ಪತ್ರೆಗಳು ಜನರನ್ನು ದೋಚುತ್ತಿವೆ. ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 37,069 ಹುದ್ದೆಗಳು ಖಾಲಿ ಇವೆ. ಒಳಡಳಿತ ಇಲಾಖೆಯಲ್ಲಿ 26,168, ಕಂದಾಯ ಇಲಾಖೆಯಲ್ಲಿ 11,145, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಲಾಖೆಯಲ್ಲಿ 10,898 ಹುತ್ತೆಗಳು ಖಾಲಿ ಇವೆ.
ಇನ್ನೊಂದೆಡೆ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇದ್ದರೂ 2022 ರಿಂದ 24ರ ಮಧ್ಯೆ ಎರಡು ವರ್ಷಗಳಲ್ಲಿ ರಾಜ್ಯದ ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ ಒಟ್ಟಾರೆ 8,87,395 ಮಂದಿ ಪದವಿ ಪಡೆದು ಹೊರ ಬಂದಿದ್ದಾರೆ.

ಒಂದೆಡೆ ಪದವಿ ಮುಗಿಸಿ ಭವಿಷ್ಯದ ಕನಸು ಹೊತ್ತು ಅಭ್ಯರ್ಥಿಗಳು ಕಾಲೇಜನಿಂದ ಬದುಕಿನ ಅಂಗಳಕ್ಕೆ ಕಾಲಿಡುತ್ತಿದ್ದರೆ, ಸರ್ಕಾರದ ನಿರ್ಲಕ್ಷ್ಯ ಧೋರಣೆ ರಾಜ್ಯದ ಭವಿಷ್ಯಕ್ಕೇ ಕೊಳ್ಳಿ ಇಡುವಂತಿದೆ. ಹೀಗಾಗಿ ಪ್ರಜ್ಞಾವಂತಿಕೆಯ ಆಡಳಿತ ರಾಜ್ಯಕ್ಕೆ ಬೇಕಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಖಾಲಿ ಹುದ್ದೆಗಳು ಭರ್ತಿಯಾಗಿ ಒಂದಿಷ್ಟು ಅರ್ಹ ಪದವಿಧರರಿಗೆ ಉದ್ಯೋಗ ಸಿಕ್ಕು, ಆಡಳಿತ ಯಂತ್ರ ಚುರುಕಾಗಿ, ಆರೋಗ್ಯ ವೃದ್ಧಿಸಿ, ಮಕ್ಕಳು ಉತ್ತಮ ವಿದ್ಯಾವಂತರಾಗಲಿ ಎಂಬುವುದು ಕರ್ನಾಟಕ ನ್ಯೂಸ್ ಬೀಟ್ ನ ಆಶಯವಾಗಿದೆ…


















