ಹೈದರಾಬಾದ್: ಕೃಷ್ಣ ಜನ್ಮಾಷ್ಟಮಿ ಆಚರಣೆಯು ಹೈದರಾಬಾದ್‌ನಲ್ಲಿ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಅಷ್ಟಮಿ ಮೆರವಣಿಗೆಯಲ್ಲಿದ್ದ ರಥಕ್ಕೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ದಾರುಣವಾಗಿ ಘಟನೆ ನಗರದ ರಾಮಂತಾಪುರದ ಗೋಕುಲನಗರದಲ್ಲಿ ನಡೆದಿದೆ.
ಭಾನುವಾರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ಸಾಗುತ್ತಿದ್ದ ರಥವು, ಏಕಾಏಕಿ ಮೇಲ್ಭಾಗದಲ್ಲಿದ್ದ ಹೈ-ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದೆ. ನಗರದಲ್ಲಿ ಮಳೆ ಸುರಿಯುತ್ತಿದ್ದ ಕಾರಣ, ರಥದಲ್ಲಿದ್ದವರಿಗೆ ತಕ್ಷಣವೇ ವಿದ್ಯುತ್ ಪ್ರವಹಿಸಿ ಈ ದುರಂತ ಸಂಭವಿಸಿದೆ.
ವಿದ್ಯುತ್ ಆಘಾತದಿಂದ ಕೃಷ್ಣಯಾದವ್ (21), ಸುರೇಶ್ ಯಾದವ್ (34), ಶ್ರೀಕಾಂತ್ ರೆಡ್ಡಿ (35), ರುದ್ರ ವಿಕಾಸ್ (39), ಮತ್ತು ರಾಜೇಂದ್ರ ರೆಡ್ಡಿ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರ ಗನ್‌ಮ್ಯಾನ್ ಆಗಿರುವ ಶ್ರೀನಿವಾಸ್ ಕೂಡ ಸೇರಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಆಂಬ್ಯುಲೆನ್ಸ್‌ಗಳು, ಧಾರಾಕಾರ ಮಳೆಯ ನಡುವೆಯೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ದೃಶ್ಯಗಳು ಮನಕಲಕುವಂತಿದ್ದವು.
ಬಿಆರ್‌ಎಸ್ ಮುಖಂಡ ಕೆಟಿಆರ್ ಸಂತಾಪ
ಈ ದುರಂತದ ಬಗ್ಗೆ ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. “ಹಬ್ಬದ ಸಂಭ್ರಮದ ವೇಳೆ ವಿದ್ಯುತ್ ಆಘಾತದಿಂದ ಐವರು ಯುವಕರು ಮೃತಪಟ್ಟಿರುವುದು ತೀವ್ರ ದುಃಖ ತಂದಿದೆ. ಮೃತರ ಕುಟುಂಬಗಳಿಗೆ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು,” ಎಂದು ಅವರು ಎಕ್ಸ್ (ಟ್ವೀಟರ್)ನಲ್ಲಿ ಬರೆದುಕೊಂಡಿದ್ದಾರೆ.
ಗುಜರಾತ್‌ನಲ್ಲೂ ಇದೇ ರೀತಿಯ ದುರ್ಘಟನೆ
ಇದೇ ರೀತಿಯ ಮತ್ತೊಂದು ದುರಂತದಲ್ಲಿ, ಶನಿವಾರ ಸಂಜೆ ಗುಜರಾತ್‌ನ ಕಛ್ ಜಿಲ್ಲೆಯಲ್ಲಿ ದಹಿ ಹಂಡಿ ಆಚರಣೆ ವೇಳೆ ವಿದ್ಯುತ್ ಕಂಬವೊಂದು ಜನರ ಮೇಲೆ ಬಿದ್ದು 15 ವರ್ಷದ ಬಾಲಕ ಮೃತಪಟ್ಟಿದ್ದಾನೆ. ‘ಮಟ್ಕಿ ಫೋಡ್’ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಜನರ ಗುಂಪಿನ ಮೇಲೆ, ಹಗ್ಗಕ್ಕೆ ಕಟ್ಟಿದ್ದ ವಿದ್ಯುತ್ ಕಂಬ ಉರುಳಿಬಿದ್ದಿದೆ. ಈ ಘಟನೆಯಲ್ಲಿ ಈಶ್ವರ್ ವರಚಂದ್ (15) ಎಂಬ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.