ಬೆಂಗಳೂರು: ನಗರದ ರಾಮಮೂರ್ತಿ ನಗರ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಕಳೆದುಕೊಂಡಿದ್ದ ಆಭರಣ ರಿಕವರಿ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಇನ್ ಸ್ಪೆಕ್ಟರ್ ರಾಜಶೇಖರ್, PSI ರುಮಾನ್ ಪಾಷಾರನ್ನು ರೆಡ್ ಹ್ಯಾಂಡ್ ಆಗಿ ಬಲೆಗೆ ಬೀಳಿಸಿದ್ದಾರೆ. ಲೋಕಾಯುಕ್ತ ಎಸ್ಪಿ ವಂಶಕೃಷ್ಣ ನೇತೃತ್ವದಲ್ಲಿ ದಾಳಿ ನಡೆದಿತ್ತು. ಆಭರಣ ರಿಕವರಿ ಮಾಡಿಕೊಡಲು ಪೊಲೀಸ್ ಅಧಿಕಾರಿಗಳು 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, 1 ಲಕ್ಷ ರೂ. ಹಣ ಮುಂಗಡವಾಗಿ ಪಡೆಯುತ್ತಿದ್ದ ವೇಳೆ ದಾಳಿ ನಡೆದಿದೆ.

ಕಳೆದು ಹೋದ ಆಭರಣಕ್ಕೆ NCRನ್ನು ಪಿಎಸ್ ಐ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿ ಆಭರಣ ಮರಳಿ ಹುಡುಕಿಕೊಡಲು2 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆಭರಣ ಕಳೆದುಕೊಂಡಿದ್ದ ಮಂಜುನಾಥ್ ಎಂಬುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಇನ್ಸ್ ಪೆಕ್ಟರ್ ರಾಜಶೇಖರ್ ಅವರ ಕಾರು ಚಾಲಕ ಇಮ್ರಾನ್ ಬಾಬುನನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಇಮ್ರಾನ್ ಬಾಬು ಖಾಸಗಿ ವ್ಯಕ್ತಿ ಎನ್ನಲಾಗಿದೆ.



















