ನವದೆಹಲಿ: ಭಾರತದ ಬಾಹ್ಯಾಕಾಶ ಸಾಧನೆಗಳಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿ ಆಕ್ಸಿಯಂ-4 ಮಿಷನ್‌ನಲ್ಲಿ ಗಗನಯಾತ್ರಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಯಶಸ್ವಿಯಾಗಿ ವಾಪಸಾಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ನಾಳೆ(ಭಾನುವಾರ) ಭಾರತಕ್ಕೆ ಮರಳುತ್ತಿದ್ದಾರೆ. ಬಾಹ್ಯಾಕಾಶದಿಂದ ಮರಳಿದ ಬಳಿಕ ಭಾರತಕ್ಕೆ ಅವರ ಮೊದಲ ಭೇಟಿ ಇದಾಗಿರಲಿದೆ.
ಮೂಲಗಳ ಪ್ರಕಾರ, ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತಮ್ಮ ಬಾಹ್ಯಾಕಾಶ ಅನುಭವಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಈ ಅನುಭವಗಳು ಭಾರತದ ಮಹತ್ವಾಕಾಂಕ್ಷೆಯ ಮಾನವ ಸಹಿತ ಗಗನಯಾನ ಯೋಜನೆಗೆ ನಿರ್ಣಾಯಕವಾಗಲಿವೆ ಎಂದು ಹೇಳಲಾಗಿದೆ.
ಶುಕ್ಲಾ ಭಾವನಾತ್ಮಕ ಪೋಸ್ಟ್
ಭಾರತದತ್ತ ತಮ್ಮ ವಿಮಾನ ಪ್ರಯಾಣ ಆರಂಭಿಸಿರುವ ಶುಭಾಂಶು ಶುಕ್ಲಾ ಪಯಣದ ಅವಧಿಯಲ್ಲೇ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. “ಭಾರತಕ್ಕೆ ಮರಳುವ ವಿಮಾನದಲ್ಲಿ ಕುಳಿತಿರುವ ನನಗೆ ಮಿಶ್ರ ಭಾವನೆಗಳು ಕಾಡುತ್ತಿವೆ. ಒಂದು ವರ್ಷಕ್ಕೂ ಹೆಚ್ಚು ಕಾಲ ನನ್ನ ಸ್ನೇಹಿತರು ಮತ್ತು ಕುಟುಂಬದಂತೆ ಇದ್ದ ಅದ್ಭುತ ತಂಡವನ್ನು ತೊರೆದು ಹೋಗುತ್ತಿರುವುದು ದುಃಖಕರ. ಆದರೆ, ಅದೇ ಸಮಯದಲ್ಲಿ, ನನ್ನ ಸ್ನೇಹಿತರು, ಕುಟುಂಬ ಮತ್ತು ದೇಶದ ಎಲ್ಲರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ. ಬದುಕಿನ ಅರ್ಥವೇ ಬಹುಶಃ ಇದಾಗಿರಬಹುದು” ಎಂದು ಬರೆದಿದ್ದಾರೆ.
“ಬಾಹ್ಯಾಕಾಶ ಹಾರಾಟದಲ್ಲಿ ಏಕೈಕ ಸ್ಥಿರವಾದ ವಿಷಯವೆಂದರೆ ಬದಲಾವಣೆ,” ಎಂದು ತಮ್ಮ ಕಮಾಂಡರ್ ಪೆಗ್ಗಿ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ. ತಮ್ಮನ್ನು ಬಾಹ್ಯಾಕಾಶ ಯಾತ್ರೆಗೆ ಸಜ್ಜುಗೊಳಿಸಲು ಸಹಕರಿಸಿದ ನಾಸಾ, ಆಕ್ಸಿಯಂ ಮತ್ತು ಸ್ಪೇಸ್ಎಕ್ಸ್ ಸಂಸ್ಥೆಗಳಿಗೂ ಅವರು ಧನ್ಯವಾದ ತಿಳಿಸಿದ್ದಾರೆ.
ರಾಷ್ಟ್ರೀಯ ಬಾಹ್ಯಾಕಾಶ ದಿನದ ಆಚರಣೆಯಲ್ಲಿ ಭಾಗಿ: ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವುದರ ಜೊತೆಗೆ, ಶುಕ್ಲಾ ಅವರು ಆಗಸ್ಟ್ 23 ರಂದು ನಡೆಯುವ ರಾಷ್ಟ್ರೀಯ ಬಾಹ್ಯಾಕಾಶ ದಿನದ ಆಚರಣೆಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಗಗನಯಾನ ಯೋಜನೆಗೆ ಸಹಕಾರ: ಪ್ರಧಾನಿ ಮೋದಿ ಅವರ ನಿರ್ದೇಶನದಂತೆ, ಶುಕ್ಲಾ ಅವರು ತಮ್ಮ ತರಬೇತಿ ಮತ್ತು ಬಾಹ್ಯಾಕಾಶದಲ್ಲಿನ ವಾಸ್ತವ್ಯದ ಸಂಪೂರ್ಣ ವಿವರಗಳನ್ನು ದಾಖಲಿಸಿದ್ದಾರೆ. ಈ ದಾಖಲೆಗಳು ಭಾರತದ ಪ್ರಪ್ರಥಮ ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮವಾದ ಗಗನಯಾನಕ್ಕೆ ಕೈಪಿಡಿಯಾಗಿ ಬಳಕೆಯಾಗಲಿವೆ. ಈ ಯೋಜನೆಯು ಭಾರತೀಯ ರಾಕೆಟ್ ಬಳಸಿ ಭಾರತೀಯ ನೆಲದಿಂದಲೇ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿ ಹೊಂದಿದೆ. ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಭಾರತವಾಗಲಿದೆ.
ಭಾರತದ ಬಾಹ್ಯಾಕಾಶ ಭವಿಷ್ಯ: ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದು, ಮುಂದಿನ ದಶಕದಲ್ಲಿ ತನ್ನದೇ ಆದ ಅಂತರಿಕ್ಷ ಕೇಂದ್ರ ಸ್ಥಾಪಿಸುವ ಮಹತ್ವದ ಯೋಜನೆಯನ್ನು ಹೊಂದಿದೆ. ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲೂ, 2040ರ ವೇಳೆಗೆ ಭಾರತೀಯರನ್ನು ಚಂದ್ರನ ಮೇಲೆ ಇಳಿಸುವ ಯೋಜನೆಯನ್ನೂ ಘೋಷಿಸಿದ್ದಾರೆ.



















