ಅಮರಾವತಿ : ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಅವಧಿಯ ಮಹತ್ತರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಶಕ್ತಿ ಯೋಜನೆ’ಯ ಮಾದರಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ “ಸ್ತ್ರೀ ಶಕ್ತಿ ಯೋಜನೆ’ಗೆ ಆಂಧ್ರಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು ಚಾಲನೆ ನೀಡಿದ್ದಾರೆ.
ಆಂಧ್ರ ಸರ್ಕಾರದ ಈ ಮಹತ್ತರ ಯೋಜನೆಯಡಿ ಮಹಿಳೆಯರು ಹಾಗೂ ತೃತೀಯ ಲಿಂಗಿಗಳು ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಪಡಿತರ ಚೀಟಿಯನ್ನು ತೋರಿಸಿ ಸಾಮಾನ್ಯ ಬಸ್, ಮೆಟ್ರೋ ಎಕ್ಸ್ ಪ್ರೆಸ್ ಒಳಗೊಂಡಂತೆ ಆಂಧ್ರದ ಸಾರಿಗೆ ಇಲಾಖೆಯ ಅಡಿಯಲ್ಲಿ ಇರುವ 5 ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಯೋಜನೆಗೆ ಚಾಲನೆ ನೀಡಿದ ಬಳಿಕ ಮೆಟ್ರೋ ಎಕ್ಸ್ ಪ್ರೆಸ್ ಬಸ್ ಹತ್ತಿದ ಸಿಎಂ ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಮಹಿಳೆಯರೊಂದಿಗೆ ಪ್ರಯಾಣಿ ಬೆಳೆಸಿದ್ದಾರೆ.
ಈ ಯೋಜನೆ ನಾಯ್ಡು ಅವರ ಚುನಾವಣಾ ಪೂರ್ವ ಭರವಸೆಯಾದ “ಸೂಪರ್ ಸಿಕ್ಸ್’ನಲ್ಲಿ ಒಂದಾಗಿದೆ.



















