ಬೆಂಗಳೂರು: ಬ್ಯಾಂಕಿನಲ್ಲಿ ಠೇವಣಿ ಇರಿಸಿದವರು, ಲಾಕರ್ ನಲ್ಲಿ ಚಿನ್ನ, ಆಸ್ತಿ ಪತ್ರ ಇರಿಸಿದವರು ಮೃತಪಟ್ಟರೆ, ನಾಮಿನಿಗಳಿಗೆ ಅದನ್ನು ಕ್ಲೇಮ್ ಮಾಡುವುದೇ ಇದುವರೆಗೆ ದೊಡ್ಡ ತಲೆನೋವಾಗಿತ್ತು. ಬ್ಯಾಂಕುಗಳಿಗೆ ದಾಖಲೆ ಸಲ್ಲಿಸಿ, ಅಲೆದಾಡಿ ಅವರಿಗೆ ಸಾಕಾಗುತ್ತಿತ್ತು. ಆದರೆ, ಇದನ್ನು ತಪ್ಪಿಸಲು ಆರ್ ಬಿ ಐ ಹೊಸ ಕರಡು ನಿಯಮಗಳನ್ನು ಪ್ರಕಟಿಸಿದೆ. ನಿಯಮಗಳು ಜಾರಿಗೆ ಬಂದರೆ, ನಾಮಿನಿಗಳಿಗೆ ಇನ್ನುಮುಂದೆ ಭಾರಿ ಅನುಕೂಲವಾಗಲಿದೆ.
ಹೌದು, ಠೇವಣಿಗೆ ಸಂಬಂಧಿಸಿದ ಕ್ಲೇಮ್ ಗಳಿಗೆ ಎಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸಿದ 15 ದಿನದೊಳಗೆ ಬ್ಯಾಂಕುಗಳು ಸೆಟಲ್ ಮಾಡಬೇಕು ಎಂಬುದು ಸೇರಿ ಆರ್ ಬಿ ಐ ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಠೇವಣಿಗಳಿಗೆ ನಾಮಿನಿಯನ್ನು ಹೆಸರಿಸಲಾಗಿದ್ದರೆ, ಇಂಡೆಮ್ನಿಟಿ ಬಾಂಡ್ ಅಥವಾ ವಾರಸುದಾರಿಕೆ ಪ್ರಮಾಣ ಪತ್ರ ಸೇರಿ ವಿವಿಧ ಕಾನೂನು ದಾಖಲೆಗಳನ್ನು ಕೇಳುವ ಅಗತ್ಯ ಇಲ್ಲ. ಕ್ಲೇಮ್ ಫಾರ್ಮ್, ಡೆತ್ ಸರ್ಟಿಫಿಕೇಟ್, ನಾಮಿನಿಯ ಐಡಿ ಪ್ರೂಫ್ ಮತ್ತು ವಿಳಾಸದ ಪ್ರೂಫ್ ದಾಖಲೆಗಳನ್ನು ಕೊಟ್ಟರೆ ಸಾಕು ಎಂದು ತಿಳಿಸಲಾಗಿದೆ.
ಠೇವಣಿ ಇರುವ ಖಾತೆಗಳಿಗೆ ನಾಮಿನಿ ಹೆಸರಿಸಿಲ್ಲದಿದ್ದರೆ ಸರಳ ವಿಧಾನಗಳನ್ನು ಅನುಸರಿಸಬೇಕು. 15 ಲಕ್ಷ ರೂಪಾಯಿವರೆಗಿನ ಠೇವಣಿಗಳಿಗೆ ಸರಳ ವಿಧಾನ ಇರಬೇಕು. ಹೆಚ್ಚಿನ ಮೊತ್ತಕ್ಕೆ ಪ್ರಮಾಣಪತ್ರ ಇತ್ಯಾದಿ ಹೆಚ್ಚುವರಿ ದಾಖಲೆಗಳನ್ನು ನೀಡಬೇಕಾಗಬಹುದು. ಖಾತೆದಾರರು ನಾಪತ್ರೆಯಾಗಿದ್ದು ಸತ್ತಿರುವ ಶಂಕೆ ಇದ್ದರೆ ಕೋರ್ಟ್ ನಿಂದ ಆದೇಶ ತರಬೇಕಾಗಬಹುದು ಎಂದು ಕೂಡ ಆರ್ ಬಿ ಐ ಕರಡು ಪ್ರತಿಯಲ್ಲಿ ಉಲ್ಲೇಖಿಸಿದೆ.
ಇದಲ್ಲದೆ, ಸೇಫ್ ಕಸ್ಟಡಿ ಆಸ್ತಿಗಳ ವಿಚಾರಕ್ಕೆ ಬಂದರೆ, ಕ್ಲೇಮ್ ಗೆ ಪೂರಕವಾದ ದಾಖಲೆಗಳನ್ನು ಸಲ್ಲಿಸಿ 15 ದಿನದೊಳಗೆ ಇನ್ವೆಂಟರಿ ಪ್ರಕ್ರಿಯೆ ಶುರುವಾಗಬೇಕು. ವಿಳಂಬವಾದರೆ ಬ್ಯಾಂಕುಗಳು ದಂಡ ಪಾವತಿಸಬೇಕು. ಠೇವಣಿಗಳಿಗೆ ಬ್ಯಾಂಕ್ ದರದಲ್ಲಿ ಬಡ್ಡಿ ಹಾಗೂ ವಿಳಂಬ ಅವಧಿಗೆ ಹೆಚ್ಚುವರಿ ಶೇ. 4ರಷ್ಟು ದಂಡ ತೆರಬೇಕು. ಲಾಕರ್ ಆಗಿದ್ದರೆ, ಬ್ಯಾಂಕುಗಳು ದಿನಕ್ಕೆ 5,000 ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ಆರ್ ಬಿ ಐ ಮಾಹಿತಿ ನೀಡಿದೆ.