ನವದೆಹಲಿ: ನಮ್ಮ ಸರ್ಕಾರವು ರೈತರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ದೇಶವನ್ನು, ವಿಶೇಷವಾಗಿ ರೈತರನ್ನು ರಕ್ಷಿಸಲು ನಾನು “ಗೋಡೆಯಂತೆ ಅಚಲವಾಗಿ ನಿಲ್ಲುತ್ತೇನೆ” ಎಂದು ಅವರು ತಮ್ಮ 12ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಶಪಥ ಮಾಡಿದ್ದಾರೆ. ಈ ಮೂಲಕ ಭಾರತಕ್ಕೆ ಸತತವಾಗಿ ಸುಂಕದ ಬೆದರಿಕೆಯೊಡ್ಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ಮೋದಿ ಕೆಂಪುಕೋಟೆಯಿಂದಲೇ ಸ್ಪಷ್ಟ ಹಾಗೂ ಖಡಕ್ ಸಂದೇಶ ರವಾನಿಸಿದ್ದಾರೆ.
ಅನ್ನದಾತರನ್ನು ನಾನು ಬಿಟ್ಟು ಕೊಡಲ್ಲ
“ಸ್ವಾತಂತ್ರ್ಯಾನಂತರ ಎಲ್ಲರಿಗೂ ಆಹಾರವನ್ನು ಖಚಿತಪಡಿಸುವುದು ಒಂದು ಸವಾಲಾಗಿತ್ತು, ಆದರೆ ನಮ್ಮ ರೈತರು ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡಿದರು… ಇಂದು ಈ ರೈತರೊಂದಿಗೆ ನಾನು ಗೋಡೆಯಂತೆ ಅಚಲವಾಗಿ ನಿಂತಿದ್ದೇನೆ. ರೈತರ ವಿಷಯದಲ್ಲಿ ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ,” ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಖಡಾಖಂಡಿತವಾಗಿ ಹೇಳಿದರು. ಕೆಂಪುಕೋಟೆಯ ಮೇಲಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರ ಈ ಮಾತುಗಳು, ಭಾರತ ಮತ್ತು ಅಮೆರಿಕದ ನಡುವಿನ ಸ್ಥಗಿತಗೊಂಡಿರುವ ವ್ಯಾಪಾರ ಒಪ್ಪಂದದ ಕುರಿತು ಟ್ರಂಪ್‌ಗೆ ನೀಡಿದ ಸೂಕ್ಷ್ಮ ಸಂದೇಶವೆಂದೇ ವಿಶ್ಲೇಷಿಸಲಾಗುತ್ತಿದೆ.
ತಮ್ಮ ಸರ್ಕಾರದ ‘ಆತ್ಮನಿರ್ಭರ ಭಾರತ’ದ ಚಿಂತನೆಯನ್ನು ಪುನರುಚ್ಚರಿಸಿದ ಅವರು, “ಇತರ ದೇಶಗಳ ಮೇಲೆ ಅವಲಂಬಿತರಾಗುವುದು ವಿನಾಶಕ್ಕೆ ಕಾರಣವಾಗುತ್ತದೆ. ನಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ನಾವು ಸ್ವಾವಲಂಬಿಗಳಾಗಬೇಕು,” ಎಂದರು.
ಟ್ರಂಪ್ ಸುಂಕದ ಹಿನ್ನೆಲೆ
ಭಾರತೀಯ ಸರಕುಗಳ ಮೇಲೆ ಟ್ರಂಪ್ ಆಡಳಿತವು ಸುಮಾರು ಶೇ.50ರಷ್ಟು ಸುಂಕ ವಿಧಿಸಿರುವ ಸಮಯದಲ್ಲೇ ಪ್ರಧಾನಿಯವರಿಂದ ಈ ಹೇಳಿಕೆ ಹೊರಬಿದ್ದಿದೆ. ಒಂದೆಡೆ ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ಟ್ರಂಪ್ ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ಕೃಷಿ ಕ್ಷೇತ್ರದಲ್ಲಿ ಭಾರತವು ಕೆಲವೊಂದು ರಾಜಿಗಳನ್ನು ಮಾಡಿಕೊಳ್ಳಬೇಕೆಂಬ ಅಮೆರಿಕದ ಬೇಡಿಕೆಗಳಿಗೆ ಭಾರತವು ಒಪ್ಪದೇ ಇರುವುದು ಉಭಯ ರಾಷ್ಟ್ರಗಳ ನಡುವೆ ವೈಮನಸ್ಸು ಹೆಚ್ಚಾಗಲು ಕಾರಣವಾಗಿದೆ.
ವ್ಯಾಪಾರ ಒಪ್ಪಂದವೂ ಸ್ಥಗಿತಗೊಂಡಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ರೈತರ ಹಿತಾಸಕ್ತಿಗಳನ್ನು ಕಾಪಾಡಲು ನಾನು ವೈಯಕ್ತಿಕವಾಗಿ ದೊಡ್ಡ ಬೆಲೆ ತೆರಲು ಸಿದ್ಧನಿದ್ದೇನೆ ಎಂದು ಹೇಳಿದ್ದರು. “ನಮಗೆ, ನಮ್ಮ ರೈತರ ಕಲ್ಯಾಣವೇ ಸರ್ವೋಚ್ಚ. ಭಾರತವು ತನ್ನ ರೈತರು, ಹೈನುಗಾರಿಕೆ ವಲಯ ಮತ್ತು ಮೀನುಗಾರರ ಯೋಗಕ್ಷೇಮದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ನಾನು ವೈಯಕ್ತಿಕವಾಗಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ,” ಎಂದು ಅವರು ನುಡಿದಿದ್ದರು.