ಸ್ವಾತಂತ್ರ್ಯೋತ್ಸವ ಎಂದರೆ ಭಾರತೀಯರಿಗೆಲ್ಲ ಹಬ್ಬವೇ ಸರಿ. ಆದರೆ, ಈ ಹಬ್ಬದ ಸಂಭ್ರಮಕ್ಕೆ ಅದೆಷ್ಟೋ ಜನರ ಬಲಿದಾನ, ತ್ಯಾಗ ಇದೆ. ಅದೆಷ್ಟು ಜನರ ರಕ್ತ ಹರಿದಿದೆ. ಈ ಸಂಭ್ರಮದ ಮಧ್ಯೆ ಆ ಮಹಾನ್ ನಾಯಕರ ತ್ಯಾಗಕ್ಕೆ ನಾವು ಕಂಬನಿ ಮಿಡಿದು ಸೆಲ್ಯೂಟ್ ಮಾಡಲೇಬೇಕು. ಈ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವರರ ಸಾಲಿಗೆ ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಹಾಗೂ ಅವರ ಸಮಕಾಲೀನರು, ಸಹಚರರು ಬಂದು ನಿಲ್ಲುತ್ತಾರೆ. ಸಂಗೊಳ್ಳಿ ರಾಯಣ್ಣ ಹೊತ್ತಿಸಿದ್ದ ಸ್ವಾತಂತ್ರ್ಯ ಕಿಡಿ, ಬ್ರಿಟಿಷರನ್ನು ಗಢಗಢ ನಡುಗುವಂತೆ ಮಾಡಿದ್ದರೆ, ಸ್ವಾತಂತ್ರ್ಯ ಸಾರ್ವಭೌಮತ್ವಕ್ಕೆ ನಾಂದಿ ಹಾಡಿತ್ತು.

ಕಿತ್ತೂರು ಬ್ರಿಟಿಷ್ ಅವಧಿಯಲ್ಲಿ ದಕ್ಷಿಣ ಮಹರಟ್ಟಾ ದೇಶದಲ್ಲಿನ ಒಂದು ಚಿಕ್ಕ ಸಂಸ್ಥಾನ. ದತ್ತು ಅನುಮತಿಗಾಗಿ ಬ್ರಿಟಿಷರೊಂದಿಗೆ ನಡೆದಿದ್ದ ಸಂಘರ್ಷದಲ್ಲಿ ಸಂಸ್ಥಾನ ಅವಸಾನ ಕಂಡಿತ್ತು. 1824ರಲ್ಲಿ ನಡೆದ ಸಂಘರ್ಷದಲ್ಲಿ ಧಾರವಾಡದ ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯನ್ನು ಬಲಿ ಪಡೆಯಲಾಯಿತು. ಈ ಕಿತ್ತೂರಿನ ದಂಗೆಯಿಂದ ಬ್ರಿಟಿಷ್ ಅಧಿಕಾರಿಗಳು ಮಲಗಿದಾಗಲೂ ನಡಗುತ್ತಿದ್ದರು. ಕನಸಿನಲ್ಲಿಯೂ ಕಾಡುತ್ತಿದ್ದ ಈ ಭಯದ ಮನಸ್ಥಿತಿಯಲ್ಲಿಯೇ ಸಿವೆಲ್ ಮರಣ ಹೊಂದಿದನು.

ರಾಯಣ್ಣ ರೋಗನ್ನವರ ಸಂಗೊಳ್ಳಿ ಗ್ರಾಮದಲ್ಲಿ ಹುಟ್ಟಿದ ಕರುನಾಡಿನ ಮಹಾನ್ ಚೇತನ. ಇಂದೇ ಸಂಗೊಳ್ಳಿ ರಾಯಣ್ಣನ ಹುಟ್ಟು ಹಬ್ಬ. ಈ ಹಬ್ಬವನ್ನು ಇಡೀ ರಾಷ್ಟ್ರವೇ ಇಂದು ಸ್ವಾತಂತ್ರ್ಯೋತ್ಸವದ ದಿನ ಎಂದು ಆಚರಿಸುತ್ತಿದೆ. ಕಿತ್ತೂರು ಸಂಸ್ಥಾನದ ಮರು ಸ್ಥಾಪನೆಗಾಗಿ ತಂಡ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ರಾಯಣ್ಣ ನಡೆಸಿರುವ ದಂಗೆ ಅದು ಪದಗಳಿಗೂ ಸಿಲುಕದ ವರ್ಣನೀಯ. 1824 ರಿಂದ 1825ರಲ್ಲಿ ನಡೆದ ಹೋರಾಟಗಳಿಗಿಂತ ರಾಯಣ್ಣನ ಹೋರಾಟ ವಿಶಿಷ್ಟವಾದುದು. 1824ರಲ್ಲಿ ಹೋರಾಟದ ಪ್ರಭುತ್ವಕ್ಕೆ ಸಾಕ್ಷಿಯಾಗಿ ಹೋರಾಟಗಾರರಿಗೆ ಸ್ಪೂರ್ತಿಯಾಗಿ ಸಂಸ್ಥಾನದ ಕುಟುಂಬ ಇತ್ತು. ಆದರೆ, ರಾಯಣ್ಣನ ಹೋರಾಟ ಸಂಸ್ಥಾನದವರೆಲ್ಲ ಜೈಲಿಗೆ ಸೇರಿದ ನಂತರ ಆರಂಭವಾಗಿದ್ದು ಸ್ಪಷ್ಟ. ಅದಕ್ಕೂ ಮುನ್ನ ರಾಯಣ್ಣ ಸಂಸ್ಥಾನದ ಭಾಗವಾಗಿ ಹೋರಾಟ ನಡೆಸಿದವರು.

ರಾಯಣ್ಣ ಸಂಸ್ಥಾನದ ಆಚೆ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾಗ 1824ರಲ್ಲಿ ಇದ್ದಂತೆ ಸಂಸ್ಥಾನದ ಮುಖಂಡರು ಅಥವಾ ಅಧಿಕಾರಿವರ್ಗ ಇರಲಿಲ್ಲ. ಕೆಲವರು ಶಿಕ್ಷೆಗೆ ಒಳಗಾಗಿದ್ದರೆ, ಇನ್ನೂ ಕೆಲವರು ಆಸ್ತಿ ಕಳೆದುಕೊಂಡು ಸುಮ್ಮನಿದ್ದರು. ಮತ್ತೆ ಕೆಲವರು ಪಿಂಚಣಿ ಪಡೆದುಕೊಂಡು ನಿರ್ಲಿಪ್ತರಾಗಿದ್ದರು. ರಾಯಣ್ಣನ ದಂಗೆಗೆ ಪ್ರಭುತ್ವದ ಆಜ್ಞೆಗಳಾಗಲಿ ಇನಾಂ ಮುಂತಾಗಿ ನೀಡಲಾಗುತ್ತಿದ್ದ ಆಮಿಷಗಳಾಗಲಿ ಇರಲಿಲ್ಲ. ರಾಯಣ್ಣನ ಗುಂಪಿನಲ್ಲಿ ಸಂಸ್ಥಾನ ಯಾವುದೇ ಸೈನಿಕರಾಗಲಿ, ಇನಾಂ ಪಡೆದ ಸೇವಕರಾಗಲಿ ಇರಲಿಲ್ಲ.

ರಾಯಣ್ಣನ ಹೋರಾಟಕ್ಕೆ ಅರಣ್ಯವೇ ರಕ್ಷಣಾಕೋಟೆಯಾಗಿತ್ತು. ಜನರು ಹಾಗೂ ಬೆಂಬಲಿಗರೇ ಇವನಿಗೆ ಕಾವಲುಗಾರರಾಗಿದ್ದರು. ಹೀಗೆ ಕಾವಲಾಗಿದ್ದವರು ಕಾಲು ಹಿಡಿದುಕೊಟ್ಟು ಇಡೀ ಭರತ ಭೂಮಂಡಲದ ಶಾಪಕ್ಕೂ ಒಳಗಾದದರು. ಒಟ್ಟಿನಲ್ಲಿ ಇಲ್ಲಿ ಕೆಲಸ ಮಾಡಿದ್ದು ರಾಯಣ್ಣ ಮತ್ತು ಎಲ್ಲ ಸಮುದಾಯಗಳ ಆತನ ಸಹಚರರು. ತಳಸಮುದಾಯದವರನ್ನು ಸೇರಿಸಿಕೊಂಡು ಸಹಪಂಕ್ತಿ ಭೋಜನದ ಮೂಲಕ ರಾಯಣ್ಣ ಕಿತ್ತೂರಿನ ಅಧಿಕಾರ ಪಡೆಯಬೇಕೆಂದು ಪಣತೊಟ್ಟಿದ್ದರು. 1824ರ ಡಿಸೆಂಬರ್ 5ರಂದು ರಾಯಣ್ಣ ಶರಣಾಗತರಾಗಿದ್ದರು. ರಾಯಣ್ಣನನ್ನು ಸಂಪಗಾಂವಿ ಜೈಲಿನಲ್ಲಿ ಇಡಲಾಗಿತ್ತು. ನಂತರ ಕ್ಷಮಾದಾನ ನೀಡಲಾಗಿತ್ತು. ಆನಂತರವೂ ರಾಯಣ್ಣ ಬಂಡಾಯ ಮುಂದುವರೆಸಿದ. ಸುಮಾರು 400ರಿಂದ 500 ಜನರ ಬಂಡಾಯಗಾರರು 1830ರ ಜನವರಿ 5ರಂದು ಬೀಡಿಯ ಮಮ್ಲತದಾರನ ಕಚೇರಿಯನ್ನು ಸುಟ್ಟು ಖಜಾನೆಯಲ್ಲಿನ 1900 ರೂ. ಲೂಟಿ ಮಾಡಿದರು. ಜ. 12ರಂದು ಸಂಪಗಾಂವ ಮೇಲೆ ದಾಳಿ ಮಾಡಿದರು.
ರಾಯಣ್ಣ ತನ್ನ ಸಹಚರರೊಂದಿಗೆ ಬಾಲಗುಡ್ಡ ಗ್ರಾಮದ ಹಿಂಬದಿಯ ಅರಣ್ಯದಲ್ಲಿ ನೆಲೆಸಿದ್ದ ವೇಳೆ ಜ. 19ರಂದು ಲೆಪ್ಟಿನೆಂಟ್ ರಸ್ಸಲ್ ನ ನೇತೃತ್ವದ ಸೈನ್ಯ ದಾಳಿ ಮಾಡಿತು. ಈ ವೇಳೆ ರಾಯಣ್ಣನ 7 ಜನ ಸಹಚರರು ಹತರಾದರು. ಹಲವರು ಗಾಯಗೊಂಡರು. 1830ರ ಜನ. 21ರ ರಾತ್ರಿ ರಾಯಣ್ಣ ಮತ್ತು ಹಿಂಬಾಲಕರು ಗುಂಡೊಳ್ಳಿಯಲ್ಲಿ ಕಹಳೆ ಮತ್ತು ತುತ್ತೂರಿ ಊದುತ್ತ ಬ್ರಿಟಿಷರ ಮೇಲೆ ಮದ್ದು ಗುಂಡುಗಳಿಂದ ದಾಳಿ ಮಾಡಿದರು.
1830ರರ ಏ. 8ರಂದು ಬಾಳಗುಂದದ ಬೆಟ್ಟದ ಡೊರಿ ಹಲ್ಳದಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಖೋದಾನಪುರ ಲಿಂಗನಗೌಡ ಮತ್ತು ನೇಗಿನಹಾಳ ವೆಂಕನಗೌಡ ಇವರ ಮೋಸಕ್ಕೆ ಬಲಿಯಾಗಿ ರಾಯಣ್ಣ ಬ್ರಿಟಿಷರ ವಶವಾದ. ಡಿ. 16ರಂದು 20ರ ವರೆಗೆ 13 ಜನರ ವಿಚಾರಣೆ ನಡೆಸಿ ರಾಯಣ್ಣ ರೋಗನ್ನವರ, ಬಾಳ ನಾಯಕ, ಬಸಲಿಂಗಪ್ಪ, ಕುಲಬಸಪ್ಪ, ಭೀಮಾ, ಕೆಂಚಪ್ಪ, ಅಪ್ಪಾಜಿ ಅವರನ್ನು 1831ರ ಜ. 26ರಂದು ನಂದಗಡದಲ್ಲಿ ಗಲ್ಲಿಗೇರಿಸಲಾಯಿತು.
ರುದ್ರನಾಯಕ, ಯಲ್ಲಾನಾಯಕ, ಅಪೊಲಜಿ, ರಾಣೋಜಿ, ಕೊನೇರಿ, ನೇಮಣ್ಣ ಅವರಿಗೆ ಕರಿನೀರಿನ ಶಿಕ್ಷೆ ನೀಡಲಾಯಿತು. ರಾಯಣ್ಣ ಪ್ರತಿಕ್ಷಣ, ಪ್ರತಿದಿನ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಧೀರ. ಅಷ್ಟೊಂದು ತ್ಯಾಗ, ಬಲಿದಾನ ಕಂಡಿದ್ದ ನಮ್ಮ ನೆಲ, ತಾಯಂದಿರು ಹುಟ್ಟಿದರೆ ರಾಯಣ್ಣನಂತಹ ಮಗ ಹುಟ್ಟಲಿ ಎಂದು ಬೇಡಿಕೊಳ್ಳುತ್ತಿದ್ದರು. ಇಂದಿಗೂ ಆ ಪ್ರಾರ್ಥನೆ ಮುಕ್ಕೋಟಿ ದೇವರನ್ನು ಮುಟ್ಟುತ್ತಿದೆ. ಇದೊಂದೇ ಸಾಕ್ಷಿ ರಾಯಣ್ಣನ ಶೌರ್ಯ, ದೇಶಪ್ರೇಮಕ್ಕೆ…ಈ ಮಣ್ಣಿನಲ್ಲಿ ಯಾವಾಗಲೂ ರಾಯಣ್ಣನಂತಹ ಮಕ್ಕಳು ಹುಟ್ಟಲಿ. ಎಲ್ಲರಿಗೂ ರಾಯಣ್ಣ ಸ್ಪೂರ್ತಿ, ಆದರ್ಶವಾಗಲಿ..ಜೈ ಹಿಂದ್



















