ಬೆಂಗಳೂರು: ಕಾಂಗ್ರೆಸ್ ಮನೆಯಲ್ಲಿ ಮತ್ತೊಂದು ಕ್ಯಾಬಿನೆಟ್ ಸ್ಥಾನ ಖಾಲಿಯಾಗಿದೆ. ಕೆ.ಎನ್. ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ತರಹೇವಾರಿ ಚರ್ಚೆಗಳು ಆರಂಭವಾಗಿವೆ. ಖಾಲಿ ಇರುವ ಸಚಿವ ಸ್ಥಾನದ ಮೇಲೆ ಡಿಸಿಎಂ ಡಿ.ಕೆ. ಶಿವಕುಮಾರ್ ಬಣ ಕಣ್ಣಿಟ್ಟಿದೆ. ಇನ್ನೊಂದೆಡೆ ಸಚಿವ ಸ್ಥಾನ ಉಳಿಸಿಕೊಳ್ಳಲು ಸಿಎಂ ಬಣ ಪ್ರಯತ್ನಿಸುತ್ತಿದೆ.
ನಿನ್ನೆಯಷ್ಟೇ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ಕೂಡ ನಡೆದಿದೆ. ಇನ್ನೂ ಸಿಎಂ ಬೆಂಬಲಿತರ ಮಧ್ಯೆಯೇ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ದೆಹಲಿ ಪ್ರತಿನಿಧಿ ಬಿ.ಕೆ. ಹರಿಪ್ರಸಾದ್, ಡಿ. ಸುಧಾಕರ್, ರಘುಮೂರ್ತಿ, ಅನಿಲ್ ಚಿಕ್ಕಮಾದು ಸೇರಿದಂತೆ ಹಲವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಇನ್ನೊಂದೆಡೆ ಸಿಎಂ ಬೆಂಬಲಿತರ ಕೈಯಲ್ಲಿದ್ದ ಖಾತೆಯನ್ನು ಕಸಿದುಕೊಳ್ಳಲು ಡಿಸಿಎಂ ಬಣ ಆಕ್ಟಿವ್ ಆಗಿದೆ.
ಇವೆಲ್ಲವುಗಳ ಮಧ್ಯೆ ಕೆ.ಎನ್. ರಾಜಣ್ಣ ತಮ್ಮ ಸ್ಥಾನ ಉಳಿಸಿಕೊಳ್ಳಲು ಯತ್ನಿಸುತ್ತಿದ್ದು, ಅಧಿವೇಶನ ಮುಗಿಯುತ್ತಿದ್ದಂತೆ ದೆಹಲಿ ಪ್ರವಾಸ ಹೊರಟಿದ್ದಾರೆ. ದೆಹಲಿಯಲ್ಲಿ ಠಿಕಾಣಿ ಹೂಡಿ ಹೈಕಮಾಂಡ್ ಗಮನ ಸೆಳೆದು ಸಚಿವ ಸ್ಥಾನ ಉಳಿಸಿಕೊಳ್ಳಲು ಯತ್ನಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.



















