ಬೆಂಗಳೂರು : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳದ ಭಕ್ತರಿಂದ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಬೆಳಗಾವಿ, ಚಿಕ್ಕಮಗಳೂರು, ಚಾಮರಾಜನಗರ, ಗದಗ, ಕಲಬುರಗಿ, ಮೈಸೂರು, ತುಮಕೂರಿನಲ್ಲಿ ಇಂದು (ಆ.13) ಪ್ರತಿಭಟನೆಗಳು ನಡೆದಿವೆ. ಎಸ್‌ಐಟಿ ತನಿಖಾ ವರದಿ ಬರದೇ ಇದ್ದರೂ, ಧರ್ಮಸ್ಥಳ, ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಪುರಾಣ ಪ್ರಸಿದ್ಧ ಧರ್ಮಸ್ಥಳ ಕ್ಷೇತ್ರಕ್ಕೆ ಧಕ್ಕೆ ತರುವ, ಸುಳ್ಳು ನಿಂದನೆ, ಅಪಪ್ರಚಾರ ಅವಹೇಳನ ಕೆಲಸ ಮಾಡುತ್ತಿದ್ದಾರೆ. ಗಿರೀಶ್ ಮಟ್ಟಣ್ಣನವರ, ಮಹೇಶ್ ಶೆಟ್ಟಿ ತಿಮರೋಡಿ, ಸಮೀರ್ ಎಂ.ಡಿ, ಜಯಂತ್ ಸೇರಿ ಹಲವರಿಂದ ಅಪಪ್ರಚಾರ ನಡೆಯುತ್ತಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ? ಅವರಿಗೆ ಹಣದ ನೆರವು ಕೊಡುತ್ತಿರುವವರು ಯಾರು ಎಂದು ತನಿಖೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಧರ್ಮಸ್ಥಳ ಸಂಘದ ಮಹಿಳೆಯರು, ರೈತರು, ಭಕ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ನಗರದ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡಿ, ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಧರ್ಮಸ್ಥಳಕ್ಕೆ ದಿನಕ್ಕೆ 1 ಲಕ್ಷದವರೆಗೆ ಭಕ್ತರು ಬರುತ್ತಾರೆ. ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಯಾರೋ ಅನಾಮಿಕ ಹೇಳಿದ ಎಂಬ ಕಾರಣಕ್ಕೆ ತನಿಖೆ ಮಾಡಲಾಗುತ್ತಿದೆ. ಯಾರೋ ಬಂದು ವಿಧಾನಸೌಧದಲ್ಲಿ ಹೆಣ ಇದೆ ಎಂದು ಹೇಳಿದರೆ ಅಗೆಯುತ್ತಾರಾ? ಎಂದು ಭಕ್ತರು ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ 2000 ಸಾವಿರಕ್ಕೂ ಹೆಚ್ಚು ಭಕ್ತರು ನಗರದ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವರೆಗೆ ಪ್ರತಿಭಟನೆ ನಡೆಸಿದರು. ಸುಮಾರು 2 ಕಿ.ಮೀ. ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದರು. ಸುಳ್ಳಿನ ಮೃತದೇಹದ ಹಿಂದೆ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಹುನ್ನಾರವಿದೆ. ಕುತಂತ್ರಿಗಳ ಷಡ್ಯಂತ್ರಕ್ಕೆ ಸರ್ಕಾರದ ಬೆಂಬಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಚಾಮರಾಜನಗರದಲ್ಲಿ ಧರ್ಮಸ್ಥಳ ಉಳಿಸಿ ಎಂದು ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ನಗರದ ಚಾಮರಾಜೇಶ್ವರ ದೇವಾಲಯದಿಂದ ಡಿಸಿ ಕಚೇರಿವರೆಗೂ ಪೋಸ್ಟರ್ ಹಿಡಿದು ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ್ದಾರೆ.
ಗದಗದಲ್ಲಿ ಅಂಬೇಡ್ಕರ್ ಭವನದಿಂದ ಜಿಲ್ಲಾಡಳಿತ ಭವನದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿ ನಡೆಸಲಾಯಿತು. ಬಳಿಕ ನಗರದ ಕೋರ್ಟ್ ಸರ್ಕಲ್ ಬಳಿ ರಸ್ತೆ ತಡೆದು, ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರಹಾಕಿದರು. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಒಳಸಂಚು ನಡೆಯುತ್ತಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕಲಬುರಗಿಯಲ್ಲೂ ಧಾರ್ಮಿಕ ಸಂಘಟನೆಗಳಿಂದ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ಪ್ರತಿಭಟನೆಯಲ್ಲೂ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಸಹ ಭಾಗಿಯಾಗಿದ್ದರು. ಜಗತ್ ವೃತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ, ಸುಳ್ಳು ಮಾಹಿತಿ ಹಂಚುತ್ತಿರುವ ಯೂಟ್ಯೂಬರ್‌ಗಳು ಹಾಗೂ ಅಪಪ್ರಚಾರ ಮಾಡುತ್ತಿರುವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು.
ಕೊಪ್ಪಳದಲ್ಲಿ ಜಿಲ್ಲಾ ಜೈನ ಸಮುದಾಯ ಹಾಗೂ ಧರ್ಮಸ್ಥಳ ಭಕ್ತವೃಂದದಿಂದ ಪ್ರತಿಭಟನೆ ನಡೆಯಿತು. ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಭಕ್ತರು, ಮಹೇಶ್ ಶೆಟ್ಟಿ ತಿಮರೊಡಿ ಹಾಗೂ ಗಿರೀಶ್ ಮಟ್ಟಣ್ಣನವರ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭಾಗಿಯಾಗಿದ್ದರು.
ತುಮಕೂರಿನಲ್ಲೂ ಸಹ ಪ್ರತಿಭಟನೆ ನಡೆಸಲಾಯಿತು. ಗುಮ್ಚಿ ಸರ್ಕಲ್ ನಲ್ಲಿ ಪ್ರತಿಭಟನಾಕಾರರು, ಕೋತಿತೋಪು, ಮಂಡಿಪೇಟೆ, ಡಿಸಿ ಕಚೇರಿ ಹಾಗೂ ಎಮ್ ಜಿ ರಸ್ತೆಯ ಸಂಪರ್ಕ ಬಂದ್ ಮಾಡಿ ಪ್ರತಿಭಟಿಸಿದರು. ಬೆಳ್ಳಾವಿ ಕಾರದ ಮಠದ ವೀರಬಸವ ಸ್ವಾಮಿಜಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸ್ವಾಮೀಜಿ, ಧರ್ಮಸ್ಥಳ ಕ್ಷೇತ್ರ, ಸರ್ಕಾರ ಮಾಡದ ಕೆಲಸ ಮಾಡುತ್ತಿದೆ. ಮದ್ಯವರ್ಜನ ಶಿಬಿರ, ಕೆರೆಕಟ್ಟೆಗಳ ಸಂರಕ್ಷಣೆ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ, ಅನ್ನದಾನ ಹೀಗೆ ನೂರಾರು ಸಮಾಜ ಸೇವೆ ಮಾಡುತ್ತಿದೆ. ಮಹಿಳಾ ಸಬಲೀಕರಣದಲ್ಲಿ ಧರ್ಮಸ್ಥಳದ ಪಾತ್ರ ಬಹಳ ದೊಡ್ಡದ್ದು. ಅಂಥವರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಮಳೆಯ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಧರ್ಮ ರಕ್ಷಣೆಗೆ ಜನ ಸೇರಿದ್ದು ಸಂತೋಷವಾಗಿದೆ ಎಂದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಿಲ್ಲಿಸಲಾಯಿತು.
ಮೈಸೂರಿನಲ್ಲಿ ಧರ್ಮಸ್ಥಳ ಉಳಿಸಿ ಎಂದು ಭಕ್ತರು ಪ್ರತಿಭಟನಾ ಜಾಥಾ ನಡೆಸಿದರು. ಮೈಸೂರು ಹಾಲು ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಜಾಥಾ ನಡೆಸಲಾಯಿತು.
ದಾವಣಗೆರೆಯಲ್ಲಿ ಧರ್ಮಸ್ಥಳ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಖಂಡಿಸಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸಭೆ ನಡೆಸಿ, ಆಗಸ್ಟ್ 20 ರಂದು ಬೆಳಿಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆಗೆ ಭಕ್ತರು ನಿರ್ಧರಿಸಿದ್ದಾರೆ.



















