ಬೆಂಗಳೂರು : ಕಳೆದ ಅಧಿವೇಶನದ ಸಂದರ್ಭದಲ್ಲಿ 18 ಬಿಜೆಪಿ ಸದಸ್ಯರನ್ನು ಅಮಾನತುಗೊಳಿಸಿದ್ದ ಆದೇಶವನ್ನು ಹಿಂಪಡೆದುಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಪಟ್ಟ ಸ್ಥಿರೀಕರಣ ಪ್ರಸ್ತಾವಕ್ಕೆ ವಿಧಾನಸಭೆ ಅಂಗೀಕಾರ ನೀಡಿದೆ.
ಆಡಳಿತ ಪಕ್ಷ ಹಾಗೂ ವಿಪಕ್ಷದ ನಡುವೆ ನಡೆದ ಜಟಾಪಟಿ ಸಂದರ್ಭದಲ್ಲಿ ಬಿಜೆಪಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಡಾ. ಅಶ್ವಥ್ ನಾರಾಯಣ್, ಎಸ್. ಆರ್. ವಿಶ್ವನಾಥ್, ಭೈರತಿ ಬಸವರಾಜ್, ಎಂ. ಆರ್ ಪಾಟೀಲ್, ಚನ್ನಬಸಪ್ಪ, ಉಮಾನಾಥ್ ಕೋಟ್ಯಾನ್, ಶರಣು ಸಲಗಾರ್, ಶೈಲೇಂದ್ರ ಬೆಲ್ದಾಳೆ, ಯಶಪಾಲ್ ಸುವರ್ಣ, ಬಿ.ಪಿ ಹರೀಶ್, ಡಾ. ಭರತ್ ಶೆಟ್ಟಿ, ಚಂದ್ರ ಲಮಾಣಿ, ವೇದವ್ಯಾಸ್ ಕಾಮತ್, ಮುನಿರತ್ನ, ಬಸವರಾಜ್ ಮತ್ತಿಮೋಡ, ಧೀರಜ್ ಮುನಿರಾಜ್ ಮೊದಲಾದ 18 ಮಂದಿಯನ್ನು ವಿಧಾನಸಭೆಯಿಂದ ಆರು ತಿಂಗಳ ಕಾಲ ಅಮಾನತು ಮಾಡಲಾಗಿತ್ತು.
ಈ ಬಗ್ಗೆ ಸಾಕಷ್ಟು ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಕೊನೆಗೆ ಬಿಜೆಪಿ ಶಾಸಕರು ವಿಷಾದವನ್ನೂ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮೇ 25ರಂದು ಅಮಾನತು ಆದೇಶವನ್ನು ಸಭಾಧ್ಯಕ್ಷ ಯು.ಟಿ ಖಾದರ್ ವಾಪಾಸ್ ಪಡೆದಿದ್ದರು. ಈ ನಿರ್ಣಯವನ್ನು ಸ್ಥಿರೀಕರಿಸುವ ಘಟನೋತ್ತರ ಪ್ರಸ್ತಾವವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್. ಕೆ ಪಾಟೀಲ್ ಮಂಡಿಸಿದ ಬಳಿಕ ಸದನದಲ್ಲಿ ಅಂಗೀಕಾರಗೊಂಡಿದೆ.


















