ನವದೆಹಲಿ: ಆಪರೇಷನ್ ಸಿಂದೂರಕ್ಕೆ ಸಂಬಂಧಿಸಿದ ಹಲವು ಮಹತ್ವದ ಮಾಹಿತಿಗಳನ್ನು ವಾಯುಪಡೆ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ ಅವರು ಬೆಂಗಳೂರಿನಲ್ಲಿ ಬಹಿರಂಗಪಡಿಸಿದ ಬೆನ್ನಲ್ಲೇ ಭಾರತದ ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಇದೇ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನವು ತನ್ನ ಜನರ ಮುಂದೆ ವಿಜಯದ ಕಥೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಐಐಟಿ ಮದ್ರಾಸ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜ.ದ್ವಿವೇದಿ ಅವರು, ಆಪರೇಷನ್ ಸಿಂದೂರ್ ಒಂದು ‘ಗೇಮ್ ಆಫ್ ಚೆಸ್’ ಇದ್ದ ಹಾಗೆ, ಅದರಲ್ಲಿ ಭಾರತ ‘ಚೆಕ್‌ಮೇಟ್’ ನೀಡುವ ಮೂಲಕ ಭರ್ಜರಿ ಜಯಗಳಿಸಿದೆ ಎಂದು ಹೇಳಿದ್ದಾರೆ.
ಚೆಸ್ ಆಟಕ್ಕೆ ಹೋಲಿಕೆ
ಆಪರೇಷನ್ ಸಿಂದೂರ ಸಾಂಪ್ರದಾಯಿಕ ಕಾರ್ಯಾಚರಣೆಗಳಿಗಿಂತ ಭಿನ್ನವಾಗಿತ್ತು ಎಂದು ಜನರಲ್ ದ್ವಿವೇದಿ ವಿವರಿಸಿದ್ದು, “ಇದು ಒಂದು ಬೂದು ವಲಯದ ಕಾರ್ಯಾಚರಣೆ. ನಾವು ಮುಂದಿನ ನಡೆಯನ್ನು ಊಹಿಸಲಾಗದಂತಹ ಸನ್ನಿವೇಶದಲ್ಲಿ ನಮ್ಮ ಪ್ರತಿ ನಡೆಯನ್ನು ಯೋಜಿಸಬೇಕಾಯಿತು. ಆದರೆ ನಮ್ಮ ಸೈನಿಕರು ಪ್ರತಿ ಹೆಜ್ಜೆಯಲ್ಲೂ ಜಾಗರೂಕರಾಗಿದ್ದು, ಶತ್ರುಗಳ ಪ್ರತಿ ನಡೆಯನ್ನು ಸಮರ್ಥವಾಗಿ ಎದುರಿಸಿದರು. ಅಂತಿಮವಾಗಿ ನಾವು ಅವರಿಗೆ ಚೆಕ್‌ಮೇಟ್ ನೀಡಿದೆವು,” ಎಂದು ಹೇಳಿದ್ದಾರೆ.
ಜ.ದ್ವಿವೇದಿ ಅವರು ಪಾಕಿಸ್ತಾನದ ‘ಕಥೆ ನಿರ್ವಹಣೆ’ (Narrative Management) ಬಗ್ಗೆ ವಿಡಂಬನೆ ಮಾಡುತ್ತಾ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಫೀಲ್ಡ್ ಮಾರ್ಷಲ್ ಹುದ್ದೆ ನೀಡಿದ್ದನ್ನು ಉಲ್ಲೇಖಿಸಿ, “ನೀವು ಗೆದ್ದಿದ್ದೀರಾ ಅಥವಾ ಸೋತಿದ್ದೀರಾ ಎಂದು ಪಾಕಿಸ್ತಾನಿಯರನ್ನು ಕೇಳಿದರೆ, ಅವರು ‘ನಮ್ಮ ಸೇನಾ ಮುಖ್ಯಸ್ಥರು ಫೀಲ್ಡ್ ಮಾರ್ಷಲ್ ಆಗಿದ್ದಾರೆ, ಹಾಗಾಗಿ ನಾವೇ ಗೆದ್ದಿದ್ದೇವೆ’ ಎಂದು ಹೇಳುತ್ತಾರೆ,” ಎಂದು ವ್ಯಂಗ್ಯವಾಡಿದ್ದಾರೆ.
ಸರ್ಕಾರದ ಸ್ಪಷ್ಟ ನಿರ್ಧಾರಕ್ಕೆ ಪ್ರಶಂಸೆ
ಈ ಕಾರ್ಯಾಚರಣೆಯ ಯಶಸ್ಸಿಗೆ ಸರ್ಕಾರದ ಸ್ಪಷ್ಟ ನಿರ್ಧಾರ ಮತ್ತು ರಾಜಕೀಯ ಇಚ್ಛಾಶಕ್ತಿಯೇ ಕಾರಣ ಎಂದು ಜನರಲ್ ದ್ವಿವೇದಿ ಕೂಡ ಹೇಳಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕ ದಾಳಿಯ ನಂತರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು “ಸಾಕು, ಇನ್ನು ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದರು. “ಆಗ ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಯಿತು. ಏನು ಮಾಡಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ನೀಡಿದರು. ಆಪರೇಷನ್ ಸಿಂದೂರದ ಯಶಸ್ಸಿಗೆ ಇದು ಮುಖ್ಯ ಕಾರಣವಾಯಿತು,” ಎಂದು ದ್ವಿವೇದಿ ತಿಳಿಸಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯು ಭಾರತದ ಮಿಲಿಟರಿ ಶಕ್ತಿಯನ್ನು ಮತ್ತು ಭಯೋತ್ಪಾದನೆಯನ್ನು ಎದುರಿಸುವ ಸಾಮರ್ಥ್ಯವನ್ನು ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸಿದೆ. ಭಯೋತ್ಪಾದಕರ ಮೂಲಸೌಕರ್ಯವನ್ನು ನಾಶಪಡಿಸುವಲ್ಲಿ ಮತ್ತು ಗಡಿ ದಾಟಿ ಬರುವ ಯಾವುದೇ ಬೆದರಿಕೆಯನ್ನು ನಿಗ್ರಹಿಸುವಲ್ಲಿ ಭಾರತೀಯ ಸೇನೆ ಎಷ್ಟು ಪ್ರಬಲವಾಗಿದೆ ಎಂಬುದನ್ನು ಇದು ತೋರಿಸಿದೆ ಎಂದಿದ್ದಾರೆ.



















