ಬೆಂಗಳೂರು : ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ನಾಯಕರು ಸಂಚರಿಸಿ ರಸ್ತೆಗಳ ಪರಿಸ್ಥಿತಿ ಹೇಗಿದೆ ಎಂದು ಪರಿಶೀಲಿಸಲಿ. ಮೆಟ್ರೋ ಪ್ರಧಾನಿ ಮೋದಿ ಕನಸಿನ ಕೂಸು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ವಿಜಯೇಂದ್ರ, “ನಮ್ಮ ಆಡಳಿತದಲ್ಲಿ ಆಗಿರುವ ಕಾಮಗಾರಿಗೆ ಮೋದಿ ಚಾಲನೆ ಕೊಡುತ್ತಿದ್ದಾರೆ” ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಜಗತ್ತಿನ ಭೂಪಟದಲ್ಲಿ ಬೆಂಗಳೂರನ್ನು ಗುರುತಿಸುತ್ತಾರೆ. ಇಂತಹ ನಗರಕ್ಕೆ ಮೆಟ್ರೋ ಸಂಚಾರ ಅವಶ್ಯಕ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕೆಲಸ ಆಗುತ್ತಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸ ಪ್ರಗತಿ ಮಂದಗತಿಯಿಂದ ಸಾಗುತ್ತಿದೆ.
ಉದ್ಘಾಟನಾ ಕಾರ್ಯಕ್ರಮಕ್ಕೆ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗೆ ಕೊನೆ ಕ್ಷಣದಲ್ಲಿ ಆಹ್ವಾನ ನೀಡಿರುವ ವಿಚಾರಕ್ಕೆ ಸ್ಪಂದಿಸಿದ ವಿಜಯೇಂದ್ರ, ರಾಜ್ಯದಿಂದ ಪ್ರಧಾನಿಯವರನ್ನು ಸ್ವಾಗತಿಸುವುದಕ್ಕೆ ಪಕ್ಷದಿಂದ ಯಾರಾದರೂ ಒಬ್ಬರು ಇರಬೇಕಿದೆ. ಸರ್ಕಾರದ ಪರವಾಗಿಯೂ ಯಾರಾದರೂ ಇರುತ್ತಾರೆ. ವೇದಿಕೆ ಮೇಲೆ ಯಾರಿರಬೇಕು, ಯಾರಿರಬಾರದು ಎನ್ನುವುದನ್ನು ಪ್ರಧಾನಿ ಕಚೇರಿ ನಿರ್ಧರಿಸುತ್ತದೆ. ಇದನ್ನು ರಾಜ್ಯ ಬಿಜೆಪಿ ನಿರ್ಧರಿಸುವುದಲ್ಲ. ಈ ಸಂಬಂಧಿಸಿದಂತೆ ನಾನು ಕೂಡ ಪ್ರಧಾನಿ ಕಚೇರಿಯಲ್ಲಿ ಸಂಮರ್ಕಿಸಿದ್ದೇನೆ. ಅಶೋಕ್ ಅವರ ಹೆಸರು ಕೂಡ ಅದರಲ್ಲಿದೆ. ಪ್ರಹ್ಲಾದ ಜೋಶಿ ಅವರನ್ನು ಸಹ ಸಂಪರ್ಕ ಮಾಡಿರುವುದಾಗಿ ಹೇಳಿದ್ದಾರೆ.