ಬೆಂಗಳೂರು : ಕಾರ್ಮಿಕ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ಸಚಿವ ಸಂತೋಷ್ ಲಾಡ್ ವಿರುದ್ಧ ಬಿಜೆಪಿ ಪರಿಷತ್ ಸದಸ್ಯ ಕೆ ಎಸ್ ನವೀನ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ನವೀನ್, ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದಿದ್ದಾರೆ.

ಚಿತ್ರದುರ್ಗದಲ್ಲಿ ಕಟ್ಟಡ ಕಾರ್ಮಿಕರಿಗೆ ಮಾಡಿರುವ ಆರೋಗ್ಯ ತಪಾಸಣೆಯಲ್ಲಿ ಅವ್ಯವಹಾರ ಆಗಿದೆ. 2022ರಲ್ಲಿ 33,500 ಕಟ್ಟಡ ಕಾರ್ಮಿಕರಿಗೆ ನಡೆಸುವ ಆರೋಗ್ಯ ತಪಾಸಣೆಗೆ 9,89,59,000 ರೂ. ವೆಚ್ಚ ಮಾಡಲಾಗಿದೆ. 2023ರಲ್ಲೂ 33,500 ಕಾರ್ಮಿಕರಿಗೆ ಆರೋಗ್ಯ ತಪಾಸಣೆಗೆ 9,84,59,000 ರೂ ವೆಚ್ಚ. 2022ರ ವೆಚ್ಚದ ವಿವರವನ್ನೇ 2023ರಲ್ಲೂ ಕಟ್ ಆ್ಯಂಡ್ ಪೇಸ್ಟ್ ಮಾಡಲಾಗಿದೆ. ಎರಡೂ ವರ್ಷದ್ದು ಸೇರಿ ಒಟ್ಟು 19.74 ಕೋಟಿ ವೆಚ್ಚ ತೋರಿಸಿದ್ದಾರೆ. ಆದರೆ ಆರೋಗ್ಯ ತಪಾಸಣಾ ವರದಿ ಕಾರ್ಮಿಕರಿಗೆ ಕೊಟ್ಟಿಲ್ಲ, ಅಶ್ವಿನಿ ಆಸ್ಪತ್ರೆಯಲ್ಲಿ ನೀಡಿರುವ ವರದಿಯಲ್ಲಿ ಆಸ್ಪತ್ರೆಯ ಸೀಲ್ ಮತ್ತು ಸಹಿ ಇಲ್ಲ. ಆಸ್ಪತ್ರೆಯವರ ವರದಿಯಲ್ಲಿ ವೈದ್ಯರ ಸಹಿ, ಸೀಲ್ ಹಾಕಿಲ್ಲ. ಡಾಕ್ಟರ್ ಗಳ ಬದಲು ಕಾರ್ಮಿಕ ಇಲಾಖೆ ಅಧಿಕಾರಿಗಳ ಸಹಿ, ಸೀಲ್ ಇದೆ ಎಂದು ದಾಖಲೆ ಸಹಿತ ಅವರು ಕಿಡಿ ಕಾರಿದ್ದಾರೆ.

ಇನ್ನು, ಅಶ್ವಿನಿ ಆಸ್ಪತ್ರೆ ಒಂದು ಆಯುರ್ವೇದ ಆಸ್ಪತ್ರೆ 2940 ರೂ. ತಲಾ ವ್ಯಕ್ತಿಗೆ ಆರೋಗ್ಯ ತಪಾಸಣೆ ವೆಚ್ಚವಾಗಿದೆ ಎಂದು ತೋರಿಸಿದ್ದಾರೆ. ಈ ದರ ಕೇಂದ್ರದ ಸಿಜಿಹೆಚ್‌ಎಸ್ ನಿಗದಿಪಡಿಸಿರುವ ದರಕ್ಕಿಂತ ಶೇ.150 ರಷ್ಟು ಹೆಚ್ಚಳ ಮಾಡಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಆರೋಪ ಮಾಡಲಾಗಿದೆ. ಆರೋಗ್ಯ ತಪಾಸಣೆ ಮಾಡಿರುವುದು ಕಟ್ಟಡ ಕಾರ್ಮಿಕರಿಗೇ ಗೊತ್ತಿಲ್ಲ. ಚಿತ್ರದುರ್ಗದ ಮಾದರಿಯಲ್ಲೇ ಬೇರೆ ಬೇರೆ ಜಿಲ್ಲೆಗಳಲ್ಲೂ ಆರೋಗ್ಯ ತಪಾಸಣೆ ಹೆಸರಲ್ಲಿ ದೋಖಾ ನಡೆಸಲಾಗಿದೆ. ರಾಜ್ಯಾದ್ಯಂತ 300 ಕೋಟಿ ರೂ. ಅಕ್ರಮ ನಡೆಸಿದ್ದಾರೆಂದು ನವೀನ್ ಆರೋಪ ಮಾಡಿದ್ದಾರೆ.
ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಗೋಲ್‌ಮಾಲ್‌ನಲ್ಲಿ ಸಚಿವ ಸಂತೋಷ್ ಲಾಡ್ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ನವೀನ್, ಆರ್‌ಟಿಐನಲ್ಲೂ ಇದರ ಬಗ್ಗೆ ದಾಖಲೆ ಕೊಡುತ್ತಿಲ್ಲ. ಯಾರಿಗೂ ದಾಖಲೆ ಕೊಡದಂತೆ ಇಲಾಖೆಗೆ ಸಚಿವರು ಸೂಚಿಸಿದ್ದಾರಂತೆ, ಈ ಪ್ರಕರಣದ ಹೊಣೆಯನ್ನು ಸಂತೋಷ್ ಲಾಡ್ ಹೊರಬೇಕು. ರಾಹುಲ್ ಗಾಂಧಿಗೆ ಸಂತೋಷ್ ಲಾಡ್ ಇದರ ಹಣ ತಲುಪಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಕಟ್ಟಡ ಕಾರ್ಮಿಕರ ಸಾವಿರಾರು ಕೋಟಿ ರೂ ಹಣ ಲೂಟಿ ಆಗುತ್ತಿದೆ. ಸಿದ್ದರಾಮಯ್ಯ ಅವರು ಕೂಡಲೇ ಸಂತೋಷ್ ಲಾಡ್ ರಾಜೀನಾಮೆ ಪಡೆಯಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇದು ಕಾರ್ಮಿಕ ವಿರೋಧಿ ಸರ್ಕಾರ, ನಾವು ಇಲ್ಲಿಗೇ ಬಿಡುವುದಿಲ್ಲ, ಕಾರ್ಮಿಕರ ಜೊತೆ ಸೇರಿ ಹೋರಾಟ ಮಾಡುತ್ತೇವೆ. ಸದನದಲ್ಲೂ ಹೋರಾಟ ಮಾಡುತ್ತೇವೆ ಎಂದು ಎಮ್‌ಎಲ್‌ಸಿ ಕೆ. ಎಸ್ ನವೀನ್ ಸಚಿವ ಸಂತೋಷ್ ಲಾಡ್ ವಿರುದ್ಧ ಆಕ್ರೋಶ ಹೊರಹಾಕಿದರು.