ಮುಂಬೈ: ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ತನ್ನ ಜನಪ್ರಿಯ ಎಸ್‌ಯುವಿಗಳಾದ ಹ್ಯಾರಿಯರ್ ಮತ್ತು ಸಫಾರಿ ಶ್ರೇಣಿಗೆ ಹೊಸ ಮೆರಗು ನೀಡಿದೆ. ಗ್ರಾಹಕರಿಗೆ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಆಕರ್ಷಕ ಬೆಲೆಯಲ್ಲಿ ಹೊಸ ಆಯ್ಕೆಗಳನ್ನು ಒದಗಿಸುವ ಉದ್ದೇಶದಿಂದ, ಕಂಪನಿಯು ಹ್ಯಾರಿಯರ್ ಅಡ್ವೆಂಚರ್ ಎಕ್ಸ್ ಮತ್ತು ಸಫಾರಿ ಅಡ್ವೆಂಚರ್ ಎಕ್ಸ್+ ಎಂಬ ಹೊಸ ರೂಪಾಂತರಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಮಾದರಿಗಳು, ಈ ಹಿಂದೆ ಲಭ್ಯವಿದ್ದ ಅಡ್ವೆಂಚರ್, ಅಡ್ವೆಂಚರ್+ ಮತ್ತು ಅಡ್ವೆಂಚರ್+ ಎ ಟ್ರಿಮ್‌ಗಳ ಸ್ಥಾನವನ್ನು ತುಂಬಲಿವೆ.
ಹ್ಯಾರಿಯರ್ ಅಡ್ವೆಂಚರ್ ಎಕ್ಸ್‌ನ ಆರಂಭಿಕ ಬೆಲೆಯು 18.99 ಲಕ್ಷ ರೂಪಾಯಿ ಆಗಿದ್ದರೆ, ಸಫಾರಿ ಅಡ್ವೆಂಚರ್ ಎಕ್ಸ್+ ನ ಬೆಲೆಯು 19.99 ಲಕ್ಷ ರೂಪಾಯಿಯಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಈ ಪರಿಚಯಾತ್ಮಕ ಬೆಲೆಗಳು ಅಕ್ಟೋಬರ್ 31 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ ಎಂದು ಕಂಪನಿ ತಿಳಿಸಿದೆ.

ಹೊಸ ಹ್ಯಾರಿಯರ್ ಅಡ್ವೆಂಚರ್ ಎಕ್ಸ್ ವೇರಿಯೆಂಟ್ , ಈ ಹಿಂದಿನ ಮಾದರಿಗಿಂತ ಸುಮಾರು 55,000 ರೂಪಾಯಿ ಅಗ್ಗವಾಗಿದ್ದು, ಹೊಸ ಸೀವೀಡ್ ಗ್ರೀನ್ ಹೊರಬಣ್ಣ ಮತ್ತು ಓನಿಕ್ಸ್ ಟ್ರಯಲ್ ಎಂಬ ಕಪ್ಪು ಮತ್ತು ಕಂದು ಬಣ್ಣದ ವಿಶಿಷ್ಟ ಡ್ಯುಯಲ್-ಟೋನ್ ಇಂಟೀರಿಯರ್‌ನೊಂದಿಗೆ ಬರುತ್ತದೆ.
ಇದು 17-ಇಂಚಿನ ಅಲಾಯ್ ವೀಲ್‌ಗಳು, ಪನೋರಮಿಕ್ ಸನ್‌ರೂಫ್, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 6 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮರಾದಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಅಡ್ವೆಂಚರ್ ಎಕ್ಸ್+ ರೂಪಾಂತರದಲ್ಲಿ ಹೆಚ್ಚುವರಿಯಾಗಿ ರಿಯರ್ ಡಿಸ್ಕ್ ಬ್ರೇಕ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಮತ್ತು ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೌಲಭ್ಯಗಳು ಲಭ್ಯವಿವೆ.

ಸಫಾರಿ ಅಡ್ವೆಂಚರ್ ಎಕ್ಸ್+ ವೇರಿಯೆಂಟ್ , ಈ ಹಿಂದಿನ ಬೇಸ್ ಅಡ್ವೆಂಚರ್ ಮಾದರಿಯ ಬೆಲೆಗೇ ಲಭ್ಯವಿದ್ದು, ಹೆಚ್ಚು ಫೀಚರ್ಗಳನ್ನು ನೀಡುವುದರಿಂದ ಹಣಕ್ಕೆ ಉತ್ತಮ ಮೌಲ್ಯವನ್ನು ಒದಗಿಸುತ್ತದೆ. ಇದು ಸೂಪರ್‌ನೋವಾ ಕಾಪರ್ ಎಂಬ ವಿಶಿಷ್ಟ ಹೊರಬಣ್ಣ ಮತ್ತು ಈ ಮಾದರಿಗೆಂದೇ ಮೀಸಲಾದ ‘ಅಡ್ವೆಂಚರ್ ಓಕ್’ ಬ್ರೌನ್ ಲೆಥೆರೆಟ್ ಅಪ್‌ಹೋಲ್‌ಸ್ಟರಿಯನ್ನು ಹೊಂದಿದೆ. ಹ್ಯಾರಿಯರ್‌ನಂತೆಯೇ, ಇದರಲ್ಲಿಯೂ 10.25-ಇಂಚಿನ ಟಚ್‌ಸ್ಕ್ರೀನ್, ಪನೋರಮಿಕ್ ಸನ್‌ರೂಫ್, 6 ಏರ್‌ಬ್ಯಾಗ್‌ಗಳು, ಮತ್ತು 360-ಡಿಗ್ರಿ ಕ್ಯಾಮರಾದಂತಹ ಸೌಲಭ್ಯಗಳಿವೆ. ಇದರ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ADAS ಲೆವೆಲ್ 2 ಸುರಕ್ಷತಾ ಸೂಟ್ ಕೂಡ ಲಭ್ಯವಿದೆ.

ಈ ಎರಡೂ ಎಸ್‌ಯುವಿಗಳು ಲ್ಯಾಂಡ್ ರೋವರ್‌ನ D8 ಆರ್ಕಿಟೆಕ್ಚರ್ನಿಂದ ಪ್ರೇರಿತವಾದ ಟಾಟಾದ OMEGARC ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, 2.0-ಲೀಟರ್, 170bhp ಸಾಮರ್ಥ್ಯದ ಕ್ರೈಯೊಟೆಕ್ ಡೀಸೆಲ್ ಎಂಜಿನ್ ಅನ್ನು ಹೊಂದಿವೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿವೆ. ಗ್ರಾಹಕರಿಗೆ ಖರೀದಿ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಟಾಟಾ ಮೋಟಾರ್ಸ್ ತನ್ನ ಎಲ್ಲಾ ರೂಪಾಂತರಗಳ ಹೆಸರುಗಳನ್ನು ಸ್ಮಾರ್ಟ್, ಪ್ಯೂರ್ ಎಕ್ಸ್, ಅಡ್ವೆಂಚರ್ ಎಕ್ಸ್, ಫಿಯರ್‌ಲೆಸ್ ಎಕ್ಸ್, ಮತ್ತು ಅಕಂಪ್ಲಿಶ್ಡ್ ಎಕ್ಸ್ ಎಂದು ಸರಳೀಕರಿಸಿದೆ.



















