ಲಂಡನ್/ನವದೆಹಲಿ : ನಾಲ್ಕು ದಿನಗಳ ಕಾಲ ಲಂಡನ್, ಮಾಲ್ಡೀವ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಡರಾತ್ರಿ ಬಿಟನ್‌ಗೆ ಬಂದಿಳಿದಿದ್ದಾರೆ.
ಈ ವೇಳೆ ಪ್ರಧಾನಿ ಮೋದಿಗೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾಮರ್ ಸಾಂಪ್ರದಾಯಿಕ ಸ್ವಾಗತ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿನ ಭಾರತೀಯ ಸಮೂಹವನ್ನು ಭೇಟಿಯಾದ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
2 ದಿನಗಳ ಕಾಲ ಬ್ರಿಟನ್ ಪ್ರವಾಸದಲ್ಲಿರುವ ಮೋದಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಇಂದು ಕೀರ್ ಸ್ಟಾಮರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಅಂತಿಮ ಸಹಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂರು ವರ್ಷಗಳ ಚರ್ಚೆಯ ನಂತರ ಮೇ ತಿಂಗಳಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಲಾಗಿದ್ದು, ಇದು ಭಾರತದ ಶೇ.99 ರಷ್ಟು ರಫ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕಲಿದೆ.
ಭಾರತ-ಯುಕೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದದಿಂದ ಪ್ರಸ್ತುತ ಇರುವ 60 ಶತಕೋಟಿ ಡಾಲರ್‌ನಿಂದ ವಹಿವಾಟು ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ. ಮಾತ್ರವಲ್ಲದೇ, ಬ್ರಿಟನ್ ಉತ್ಪನ್ನಗಳಾದ ವಿಸ್ಕಿ ಮತ್ತು ಆಟೋಮೊಬೈಲ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ ಸಿಗಲಿದೆ. ಇದರೊಂದಿಗೆ ರಕ್ಷಣಾ ವಲಯ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ನಮೋ ಭಾವುಕ :
ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಭಾರತೀಯ ಸಮೂಹವನ್ನು ನರೇಂದ್ರ ಮೋದಿ ಭೇಟಿ ಮಾಡಿ ಭಾವುಕರಾದರು. ಸಾಂಪ್ರದಾಯಿಕ ಸ್ವಾಗತಕ್ಕಾಗಿ ಅಲ್ಲಿನ ಭಾರತೀಯ ಸಮೂಹಕ್ಕೆ ಧನ್ಯವಾದ ಸಲ್ಲಿಸಿದರಲ್ಲದೇ, ಭಾರತದ ಪ್ರಗತಿಗೆ ನಿಮ್ಮ ಪ್ರೀತಿ ಮತ್ತು ಬದ್ಧತೆ ನೋಡಿ ಹೃದಯ ತುಂಬಿಬರುತ್ತಿದೆ ಎಂದು ನಮೋ ಭಾವುಕರಾದರು.