ನವದೆಹಲಿ: ವೈವಾಹಿಕ ಕಲಹದ ಸಂದರ್ಭದಲ್ಲಿ ತನ್ನ ಪತಿ ಮತ್ತು ಮಾವನ ವಿರುದ್ಧ ಹಲವು ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ, ಅವರಿಗೆ ದೈಹಿಕ ಮತ್ತು ಮಾನಸಿಕ ಯಾತನೆ ನೀಡಿದ ಐಪಿಎಸ್ ಅಧಿಕಾರಿಯೊಬ್ಬರಿಗೆ ಕೂಡಲೇ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಿ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಆದೇಶದ ಜೊತೆಗೆ, ಆ ಮಹಿಳಾ ಅಧಿಕಾರಿಯ ಪತಿ, ಮಾವನ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿ, ದಂಪತಿಗೆ ವಿಚ್ಛೇದನವನ್ನೂ ಮಂಜೂರು ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸೀಹ್ ಅವರಿದ್ದ ನ್ಯಾಯಪೀಠವು ಈ ತೀರ್ಪು ನೀಡಿದೆ. 2018ರಿಂದ ಬೇರ್ಪಟ್ಟಿದ್ದ ದಂಪತಿಗೆ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ. ದಂಪತಿಯ ಪುತ್ರಿಯು ತಾಯಿಯೊಂದಿಗೆ ಇರಲಿದ್ದು, ಪತಿ ಮತ್ತು ಅವರ ಕುಟುಂಬ ಸದಸ್ಯರು ಮಗುವನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಪತ್ನಿ ದಾಖಲಿಸಿದ ಸುಳ್ಳು ಕ್ರಿಮಿನಲ್ ಪ್ರಕರಣಗಳಿಂದಾಗಿ ಪತಿ 109 ದಿನಗಳು ಮತ್ತು ಆತನ ತಂದೆ 103 ದಿನ ಜೈಲಿನಲ್ಲಿ ಕಳೆಯಬೇಕಾಯಿತು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. “ಅವರು ಅನುಭವಿಸಿದ ನೋವನ್ನು ಯಾವುದೇ ರೀತಿಯಲ್ಲಿ ಸರಿದೂಗಿಸಲು ಸಾಧ್ಯವಿಲ್ಲ,” ಎಂದು ಹೇಳಿದ ಪೀಠ, ಸಾರ್ವಜನಿಕ ಕ್ಷಮೆಯಾಚನೆಗೆ ಆದೇಶಿಸಿದೆ.
“ಐಪಿಎಸ್ ಅಧಿಕಾರಿಯಾಗಿರುವ ಮಹಿಳೆ ಮತ್ತು ಅವರ ಪೋಷಕರು, ಆಕೆಯ ಪತಿ ಮತ್ತು ಅವರ ಕುಟುಂಬ ಸದಸ್ಯರಿಗೆ ಬೇಷರತ್ ಕ್ಷಮೆಯಾಚಿಸಬೇಕು. ಈ ಕ್ಷಮಾಪಣೆಯನ್ನು ರಾಷ್ಟ್ರಮಟ್ಟದ ಪ್ರಸಿದ್ಧ ಇಂಗ್ಲಿಷ್ ಮತ್ತು ಹಿಂದಿ ಪತ್ರಿಕೆಗಳಲ್ಲಿ ಪ್ರಕಟಿಸಬೇಕು,” ಎಂದು ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಈ ಆದೇಶ ಬಂದ 3 ದಿನಗಳೊಳಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಈ ಕ್ಷಮಾಪಣೆಯನ್ನು ಪ್ರಕಟಿಸಿ, ಪ್ರಸಾರ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಈ ಕ್ಷಮೆಯು ಯಾವುದೇ ಕಾನೂನು ಹೊಣೆಗಾರಿಕೆಯ ಒಪ್ಪಿಗೆಯಾಗಿ ಪರಿಗಣಿಸಲ್ಪಡುವುದಿಲ್ಲ ಮತ್ತು ಕಾನೂನಿನ ಅಡಿಯಲ್ಲಿ ಉದ್ಭವಿಸುವ ಕಾನೂನು ಹಕ್ಕುಗಳು, ಬಾಧ್ಯತೆಗಳು ಅಥವಾ ಪರಿಣಾಮಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಪೀಠವು ಹೇಳಿದೆ.
ತನ್ನ ಸ್ಥಾನ ಮತ್ತು ಅಧಿಕಾರವನ್ನು ಅಥವಾ ತನ್ನ ಸಹೋದ್ಯೋಗಿಗಳ ಅಧಿಕಾರವನ್ನು ಬಳಸಿಕೊಂಡು ಪತಿ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ರೀತಿಯ ಕ್ರಮಗಳನ್ನು ಪ್ರಾರಂಭಿಸಬಾರದು ಎಂದು ನ್ಯಾಯಾಲಯವು ಮಹಿಳೆಗೆ ಎಚ್ಚರಿಕೆ ನೀಡಿದೆ. ಅದೇ ರೀತಿ, ಆಕೆಯ ಕ್ಷಮೆಯನ್ನು ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಪತಿಗೂ ಎಚ್ಚರಿಕೆ ನೀಡಲಾಗಿದೆ.
ಪತ್ನಿಯು ತನ್ನ ಪತಿ ಮತ್ತು ಅವರ ಕುಟುಂಬದ ವಿರುದ್ಧ ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದರೆ, ಪತಿಯೂ ಪ್ರತೀಕಾರವಾಗಿ ಪ್ರಕರಣಗಳನ್ನು ದಾಖಲಿಸಿದ್ದರು. ಅಲ್ಲದೆ, ಮೂರನೇ ವ್ಯಕ್ತಿಗಳಿಂದಲೂ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳನ್ನು ತಮ್ಮ ವ್ಯಾಪ್ತಿಗೆ ವರ್ಗಾಯಿಸುವಂತೆ ಕೋರಿ ಪತಿ ಮತ್ತು ಪತ್ನಿ ಇಬ್ಬರೂ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.