ಉಡುಪಿ/ಕುಂದಾಪುರ : ‘ನನ್ನ ಹುಟ್ಟೂರು ತ್ರಿಶೂರ್ ಆಗಿದ್ದರೂ, ಕರ್ಮಭೂಮಿಯಾಗಿರುವ ಕುಂದಾಪುರ ಎಂದರೆ ನನ್ನ ಹುಟ್ಟೂರು ಎನ್ನುವ ಭಾವನೆ ನನ್ನಲ್ಲಿ ಶಾಶ್ವತವಾಗಿದೆ’ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.
ವಿಶ್ವ ಕುಂದಾಪ್ರ ಕನ್ನಡ ದಿನದ ಪ್ರಯುಕ್ತ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ನಡೆದ 2ನೇ ವರ್ಷದ ‘ಲಗೋರಿ’ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
‘ತನಗೆ ಕನ್ನಡ ಕಲಿಸಿದ ಕುಂದಾಪುರಕ್ಕೆ ಪ್ರತಿ ಬಾರಿ ಬರುವಾಗಲೂ ನನ್ನ ತಂದೆ- ತಾಯಿಯ ಊರಿಗೆ ಬರುತ್ತಿದ್ದೇನೆ ಎನ್ನುವ ಭಾವ ನನ್ನದು. ನನ್ನ ಆಡು ಭಾಷೆಯಲ್ಲಿಯೂ ಕುಂದಾಪ್ರ ಭಾಷೆಯ ಅನೇಕ ಶಬ್ದಗಳು ಹಾಸು ಹೊಕ್ಕಾಗಿದೆ.

ಹಾಗಾಗಿ ಈ ಊರೆಂದರೆ ವಿಶೇಷ ಅಕ್ಕರೆ ನನಗೆ. ಇಲ್ಲಿ ಯಾವ ಕಾರ್ಯಕ್ರಮಕ್ಕೆ ಕರೆದರೂ, ಇಲ್ಲಿಗೆ ಬರಬೇಕು ಅನ್ನಿಸುತ್ತದೆ. ಒಳ್ಳೆಯ ಮನಸ್ಸಿಗರು ಇರುವ ಊರಿದು. ಕೇರಳದಲ್ಲಿ ತ್ರಿಶೂರು ಭಾಗದ ಮಲಯಾಳಿ ಭಾಷೆಗೆ ವಿಶೇಷ ಪ್ರಾಧಾನ್ಯತೆ ಇರುವಂತೆ, ಕರ್ನಾಟಕದಲ್ಲಿ ಕುಂದಾಪ್ರ ಕನ್ನಡಕ್ಕೆ ವಿಶೇಷ ಸಾಹಿತ್ಯ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇದೆ’ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.


















