ತಿರುವನಂತಪುರಂ : ಕೇರಳ ರಾಜಕೀಯದ ಮೇರು ವ್ಯಕ್ತಿತ್ವ ಮತ್ತು ಭಾರತದ ಅತ್ಯಂತ ಹಿರಿಯ ಕಮ್ಯುನಿಷ್ಟ್ ನಾಯಕ ವಿ. ಎಸ್ ಅಚ್ಯುತಾನಂದನ್ ದೀರ್ಘಕಾಲದ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.
ಅವರಿಗೆ ೧೦೧ ವರ್ಷವಾಗಿತ್ತು. ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ ೩:೨೦ಕ್ಕೆ ತಿರುವನಂತಪುರದ ಎಸ್.ಯು.ಟಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
೨೦೧೯ರಲ್ಲಿ ಪಾರ್ಶ್ವವಾಯುವಿಗೆ ಒಳಗಾದ ಬಳಿಕ ಅವರು ಹಾಸಿಗೆ ಹಿಡಿದಿದ್ದರು. ೧೯೬೪ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ)ವನ್ನು ತೊರೆದು ಸಿಪಿಐ (ಎಂ) ಸ್ಥಾಪಿಸಿದ ನಾಯಕರವರು. ರಾಜ್ಯ ವಿಧಾನಸಭೆಯಲ್ಲಿ ಮೂರು ಬಾರಿ ವಿರೋಧ ಪಕ್ಷದ ನಾಯಕರಾಗಿದ್ದ ಅಚ್ಯುತಾನಂದನ್, ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ೨೦೨೧ರವರೆಗೆ ವಿಧಾನಸಭೆಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.