ಬೆಂಗಳೂರು: ದೇಶದಲ್ಲೇ ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಈಗ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಜುಲೈ 15ರಿಂದಲೇ ಹೊಸ ನಿಯಮಗಳು ಜಾರಿಗೆ ಬಂದಿವೆ. ಹಾಗಾಗಿ, ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಬಳಸುವವರು ಕೆಲ ಬದಲಾವಣೆ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ವಹಿವಾಟು ನಡೆಸಬೇಕಾಗಿದೆ. ಹಾಗಾದ್ರೆ, ಎಸ್ ಬಿ ಐ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆ ತಂದಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಅಪಘಾತ ವಿಮಾ ಸುರಕ್ಷತೆ ರದ್ದು
ಎಸ್ ಬಿ ಐ ಎಲೈಟ್ ಕಾರ್ಡ್ ಹೊಂದಿದವರಿಗೆ ಬ್ಯಾಂಕ್ ಕಹಿ ಸುದ್ದಿ ನೀಡಿದೆ. ಈ ಕಾರ್ಡ್ ಹೊಂದಿದವರು ವಿಮಾನ ಅಪಘಾತದಲ್ಲಿ ಮೃತಪಟ್ಟರೆ, ಅವರ ಕುಟುಂಬಸ್ಥರಿಗೆ ಒಂದು ಕೋಟಿ ರೂಪಾಯಿ ವಿಮಾ ಸುರಕ್ಷತೆ ನೀಡಲಾಗುತ್ತಿತ್ತು. ಆದರೆ, ಈ ವಿಮಾ ಸುರಕ್ಷತೆಯನ್ನು ಎಸ್ ಬಿ ಐ ಈಗ ರದ್ದುಗೊಳಿಸಿದೆ. ಎಸ್ ಬಿ ಐ ಕಾರ್ಡ್ ಎಲೈಟ್, ಎಸ್ ಬಿ ಐ ಕಾರ್ಡ್ ಮೈಲ್ಸ್ ಎಲೈಟ್ ಹಾಗೂ ಎಸ್ ಬಿ ಐ ಕಾರ್ಡ್ ಮೈಲ್ಸ್ ಪ್ರೈಮ್ ಗ್ರಾಹಕರಿಗೆ ಒಂದು ಕೋಟಿ ರೂ. ವಿಮಾ ಸುರಕ್ಷತೆ ನೀಡಲಾಗುತ್ತಿತ್ತು. ಇದನ್ನು ಈಗ ರದ್ದುಗೊಳಿಸಲಾಗಿದೆ.
ಅಷ್ಟೇ ಅಲ್ಲ, ಇದೇ ವರ್ಷದ ಆಗಸ್ಟ್ 11ರಿಂದ ಎಸ್ ಬಿ ಐ ಕಾರ್ಡ್ ಬಹುತೇಕ ಕೋ-ಬ್ರ್ಯಾಂಡೆಡ್ ಕಾರ್ಡ್ಗಳಿಗೆ ನೀಡುತ್ತಿದ್ದ 50 ಲಕ್ಷದಿಂದ 1 ಕೋಟಿ ರೂಪಾಯಿವರೆಗಿನ ಮೊತ್ತದ ವಿಮಾ ಸುರಕ್ಷತೆಯನ್ನು ಕೂಡ ಹಿಂಪಡೆಯುತ್ತಿದೆ. ಅದರಲ್ಲೂ, ವಿಶೇಷವಾಗಿ ಯುಕೊ ಬ್ಯಾಂಕ್, ಕೆವಿಬಿ, ಪಂಜಾಬ್ & ಸಿಂಧ್ ಬ್ಯಾಂಕ್ ಇತ್ಯಾದಿ ಬ್ಯಾಂಕ್ ಗಳ ಸಹಯೋಗದ ಕಾರ್ಡ್ಗಳಿಗೆ ಅನ್ವಯಿಸುತ್ತದೆ. ಹೀಗಾಗಿ, ಈವರೆಗೂ ಉಚಿತ ವಿಮಾ ಸುರಕ್ಷತೆಗೆಯೇ ಅವಲಂಬಿತವಾಗಿದ್ದ ಗ್ರಾಹಕರು ಇನ್ನು ಮುಂದೆ ವೈಯಕ್ತಿಕ ವಿಮಾ ಖರೀದಿಗಳಿಗೆ ಆದ್ಯತೆ ನೀಡಬೇಕಾಗುತ್ತದೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ಕಳೆದ ತಿಂಗಳು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 275 ಜನ ಮೃತಪಟ್ಟಿದ್ದರು. ಇದಾದ ಬಳಿಕ ಎಲ್ಐಸಿ ಸಂಸ್ಥೆಯು ವಿಮಾ ನಿಯಮಗಳನ್ನು ಸಡಿಲಗೊಳಿಸಿತ್ತು. ಇತ್ತೀಚೆಗೆ ವಿಮಾನ ದುರಂತಗಳು ಹೆಚ್ಚಾಗುತ್ತಿರುವ ಕಾರಣ ಎಸ್ ಬಿ ಐ ವಿಮಾ ಸುರಕ್ಷತೆಯನ್ನು ಹಿಂಪಡೆದಿದೆ ಎಂದು ಹೇಳಲಾಗುತ್ತಿದೆ.



















