ಆಧಾರ್ ಕಾರ್ಡ್ ಅಂಕಿ-ಸಂಖ್ಯೆ ಹೆಸರಿನಲ್ಲಿ ದೊಡ್ಡ ಗೋಲ್ಮಾಲ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಗುರುತಿನ ದಾಖಲೆಯಾದ ಆಧಾರ್ ಕಾರ್ಡ್ ಬಗ್ಗೆ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿದೆ. ಆಧಾರ್ ಜಾರಿಯಾದಾಗಿನಿಂದ ಅಂದರೆ ಕಳೆದ 16 ವರ್ಷಗಳಲ್ಲಿ ಕೋಟ್ಯಂತರ ಜನರು ಸಾವನ್ನಪ್ಪಿದ್ದರೂ ಯುಡಿಎಐ ಕೇವಲ 1.15 ಕೋಟಿ ಕಾರ್ಡ್ ಸಂಖ್ಯೆಗಳನ್ನು ಮಾತ್ರ ನಿಷ್ಕ್ರಿಯಗೊಳಿಸಿದೆ ಎಂದು ತಿಳಿದು ಬಂದಿದೆ.
ಜೂನ್ 2025ರ ಹೊತ್ತಿಗೆ, ಭಾರತದಲ್ಲಿ 142.39 ಕೋಟಿ ಜನರು ಆಧಾರ್ ಸಂಖ್ಯೆ ಪಡೆದಿದ್ದಾರೆ. ಈ ವರ್ಷದ ಏಪ್ರಿಲ್ ವೇಳೆಗೆ ದೇಶದ ಜನಸಂಖ್ಯೆ 146.39 ಕೋಟಿ ಇದೆ ಎಂದು ಅಂದಾಜಿಸಲಾಗಿದೆ. ಆದರೆ, ನಾಗರಿಕ ನೋಂದಣಿ ವ್ಯವಸ್ಥೆ ದತ್ತಾಂಶದ ಪ್ರಕಾರ, 2007 ರಿಂದ 2019 ರವರೆಗೆ ಪ್ರತಿ ವರ್ಷ ಸರಾಸರಿ 83.5 ಲಕ್ಷ ಜನರು ಸಾವನ್ನಪ್ಪಿದ್ದಾರೆ.
ಈ ಲೆಕ್ಕಾಚಾರದಲ್ಲಿ ಕೋಟ್ಯಾಂತರ ಜನರು ಮೃತಪಟ್ಟಿದ್ದಾರೆ. ಆದರೆ, ಯುಡಿಎಐ ಈ ಕುರಿತು ಪ್ರತಿಕ್ರಿಯಿಸಿದ್ದು, ಮೃತ ವ್ಯಕ್ತಿಗಳ ಆಧಾರ್ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು ತುಂಬಾ ಜಟಿಲವಾಗಿದೆ. ರಾಜ್ಯ ಸರ್ಕಾರಗಳು ನೀಡುವ ಮರಣ ಪ್ರಮಾಣ ಪತ್ರಗಳು ಮತ್ತು ಮೃತರ ಕುಟುಂಬ ಸದಸ್ಯರು ಒದಗಿಸುವ ಮಾಹಿತಿಯ ಆಧಾರದ ಮೇಲೆ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಪ್ರತಿ ವರ್ಷ ಮರಣಗಳ ಆಧಾರದ ಮೇಲೆ ಆಧಾರ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸುವ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಮೃತ ವ್ಯಕ್ತಿಗಳ ಆಧಾರ್ ಸಂಖ್ಯೆಯ ಬಗ್ಗೆ ನಮ್ಮ ಬಳಿ ಯಾವುದೇ ನಿರ್ದಿಷ್ಟ ದಾಖಲೆ ಇಲ್ಲ ಎಂದು ಅದು ತಿಳಿಸಿದೆ.