ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ರೆಪೊದರವನ್ನು ಇಳಿಕೆ ಮಾಡಿದ ಕಾರಣ ಬ್ಯಾಂಕುಗಳು ಸೇವಿಂಗ್ಸ್, ಎಫ್ ಡಿ ಸೇರಿ ಹಲವು ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಇಳಿಕೆ ಮಾಡಿವೆ. ಇದರಿಂದಾಗಿ ಜನ ಸುರಕ್ಷಿತ ಹೂಡಿಕೆಗಾಗಿ ಎಲ್ಲಿ ಠೇವಣಿ ಮಾಡಬೇಕು ಎಂದು ಯೋಚಿಸುತ್ತಿದ್ದಾರೆ. ಆದರೆ, ಯೋಚನೆ ಬೇಡ, ರೆಪೊ ದರ ಇಳಿಕೆಯ ಬಳಿಕವೂ ಪೋಸ್ಟ್ ಆಫೀಸ್ ಯಾವುದೇ ಯೋಜನೆಗಳ ಮೇಲಿನ ಬಡ್ಡಿಯನ್ನು ಕಡಿತಗೊಳಿಸಿಲ್ಲ. ಅದರಲ್ಲೂ, ಪೋಸ್ಟ್ ಆಫೀಸ್ ಟಿಡಿ (ಟೈಮ್ ಡೆಪಾಸಿಟ್) ಯೋಜನೆಯು ಹೂಡಿಕೆದಾರರಿಗೆ ಒಳ್ಳೆಯ ರಿಟರ್ನ್ಸ್ ಕೊಡುತ್ತಿದೆ.
ಏನಿದು ಪೋಸ್ಟ್ ಆಫೀಸ್ ಟಿಡಿ?
ಬ್ಯಾಂಕ್ ಗಳಲ್ಲಿ ಎಫ್ ಡಿ (ಫಿಕ್ಸೆಡ್ ಡೆಪಾಸಿಟ್) ಇರುವ ರೀತಿಯೇ ಪೋಸ್ಟ್ ಆಫೀಸ್ ನಲ್ಲಿ ಟೈಮ್ ಡೆಪಾಸಿಟ್ ಇದೆ. ಒಂದು ನಿರ್ದಿಷ್ಟ ಮೊತ್ತವನ್ನು ಒಂದೇ ಬಾರಿಗೆ ಠೇವಣಿ ಇಡುತ್ತೀರಿ ಮತ್ತು ನಿರ್ದಿಷ್ಟ ಅವಧಿಯ ನಂತರ, ನಿಮಗೆ ಅಸಲು ಮತ್ತು ಅದರ ಮೇಲೆ ಬಡ್ಡಿ ಸೇರಿ ಒಂದು ನಿರ್ದಿಷ್ಟ ಮೊತ್ತ ಸಿಗುತ್ತದೆ. ಇದು ಖಚಿತ ಆದಾಯವನ್ನು ನೀಡುವ ಒಂದು ಸುರಕ್ಷಿತ ಹೂಡಿಕೆ ವಿಧಾನವಾಗಿದೆ. ಅದರಲ್ಲೂ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತವೂ ಆಗಿದೆ.
ಎಷ್ಟು ವರ್ಷ ಹೂಡಿಕೆ ಮಾಡಬಹುದು?
ಬ್ಯಾಂಕುಗಳ ರೀತಿಯೇ ಪೋಸ್ಟ್ ಆಫೀಸ್ ಟಿಡಿಯಲ್ಲೂ ಹಲವು ವರ್ಷಗಳವರೆಗೆ ಹೂಡಿಕೆ ಮಾಡಬಹುದಾಗಿದೆ. 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ನೀವು ಎಷ್ಟು ವರ್ಷಗಳವರೆಗೆ ಹೂಡಿಕೆ ಮಾಡುತ್ತೀರಿ ಎಂಬುದರ ಮೇಲೆ ಬಡ್ಡಿಯಲ್ಲಿ ವ್ಯತ್ಯಸಾವಾಗುತ್ತಿದೆ.
ಹೀಗಿರಲಿದೆ ಬಡ್ಡಿದರ
1 ವರ್ಷ: 6.9%
2 ವರ್ಷ: 7. %
3 ವರ್ಷ: 7.1%
5 ವರ್ಷ: 7.5%
ಟಿಡಿ ಯೋಜನೆಯಲ್ಲಿ ನೀವು ಕನಿಷ್ಠ 1 ಸಾವಿರ ರೂಪಾಯಿಯಿಂದ ಹೂಡಿಕೆ ಮಾಡಬಹುದು. ಗರಿಷ್ಠ ಎಷ್ಟು ಮೊತ್ತ ಬೇಕಾದರೂ ಠೇವಣಿ ಇರಿಸಬಹುದಾಗಿದೆ. ಉದಾಹರಣೆಗೆ, ನೀವು 1 ಲಕ್ಷ ರೂಪಾಯಿಯನ್ನು ಒಂದು ವರ್ಷದ ಅವಧಿಗೆ ಠೇವಣಿ ಇರಿಸಿದರೆ, ಶೇ.6.9ರಷ್ಟು ಬಡ್ಡಿಯೊಂದಿಗೆ 6,900 ರೂ. ಬಡ್ಡಿಯ ಲಾಭ ಸಿಗುತ್ತದೆ. ಇದೇ ಮೊತ್ತವನ್ನು ಐದು ವರ್ಷಗಳವರೆಗೆ ಹೂಡಿಕೆ ಮಾಡಿದರೆ, 7,500 ರೂಪಾಯಿ ಬಡ್ಡಿ ಸಿಗುತ್ತದೆ.



















