ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ(Shubhanshu Shukla) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(International Space Station)ದಿಂದ ಭುವಿಗೆ ಮರಳಿದ್ದಾರೆ.
ಈ ಖುಷಿ ಕ್ಷಣವನ್ನು ಶುಕ್ಲಾ ಪೋಷಕರು ಕಣ್ತುಂಬಿಕೊಂಡಿದ್ದಾರೆ. ಲೈವ್ ವೀಕ್ಷಿಸಲು ಅವರ ಪೋಷಕರು ಲಕ್ನೋದಲ್ಲಿರುವ ಸಿಟಿ ಮಾಂಟೆಸರಿ ಶಾಲೆಗೆ ಹೋಗಿದ್ದರು. ಶುಭಾಂಶು ಶುಕ್ಲಾ 18 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಈಗ ಮರಳಿದ್ದಾರೆ. ಹೀಗಾಗಿ ಭಾರತೀಯರ ಸಂತಸಕ್ಕೆ ಪಾರವೇ ಇಲ್ಲವಾಗಿದೆ. ಜುಲೈ 14 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ನಂತರ ತಂಡವು ಈಗ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್‌ಡೌನ್ ಮಾಡಿದೆ.
ಜೂ.25ರಂದು ಆಕ್ಸಿಯಂ-4 ಮಿಷನ್ ಮೂಲಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ, ಅಮೆರಿಕ ಮಹಿಳಾ ಗಗನಯಾತ್ರಿ ಪೆಗ್ಗಿ ವಿಟ್ಸನ್, ಹಂಗೇರಿಯ ಟಿಬೋರ್ ಕಾಪು ಹಾಗೂ ಪೋಲೆಂಡ್ ಗಗನಯಾತ್ರಿ ಸ್ಲಾವೋಸ್ಜ್ ಉಜ್ನಾನ್ಸ್ಕಿ ಅಂತರಿಕ್ಷ ಯಾನಕ್ಕೆ ತೆರಳಿದ್ದರು.
8 ಗಂಟೆಗಳ ಪ್ರಯಾಣದ ನಂತರ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಜೂನ್ 26 ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್ ಮಾಡಿತು. ಈ ಮಿಷನ್ 14 ದಿನಗಳದ್ದಾಗಿತ್ತು. ಈಗ ಗಗನಯಾತ್ರಿಗಳ ಮರಳುವಿಕೆ ನಾಲ್ಕು ದಿನಗಳ ವಿಳಂಬವಾಗಿದೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಸಂಸ್ಥೆ ಇಸ್ರೋ ನಡುವಿನ ಒಪ್ಪಂದದಡಿಯಲ್ಲಿ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಈ ಕಾರ್ಯಾಚರಣೆಗೆ ಆಯ್ಕೆ ಮಾಡಲಾಯಿತು.



















